ತುಮಕೂರು: ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ನೊಂದುಕೊಂಡಿರುವ ಅಭಿಮಾನಿಗಳು ಮತ್ತದೇ ತಪ್ಪು ಕೆಲಸಕ್ಕೆ ಮುಂದಾಗುತ್ತಿದ್ದು, ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅಪ್ಪು ಹೋದ ಜಾಗಕ್ಕೆ ನಾನೂ ಹೋಗುತ್ತೇನೆ ಎಂಬುದಾಗಿ ಪುನೀತ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತುಮಕೂರಿನ ಭರತ್ (30) ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ. ಇಲ್ಲಿನ ಹೆಬ್ಬೂರಿನ ಕೋಡಿಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾನು ಅಪ್ಪು ಅವರ ಅಭಿಮಾನಿಯಾಗಿದ್ದು, ಅವರ ಸಾವನ್ನು ಸಹಿಸಲಾಗುತ್ತಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.
ಗಾರೆ ಕೆಲಸ ಮಾಡಿಕೊಂಡಿದ್ದ ಭರತ್, ಅಪ್ಪು ಹೋದ ಜಾಗಕ್ಕೆ ನಾನೂ ಹೋಗುತ್ತೇನೆ, ಪುನೀತ್ ಅವರಂತೆ ನನ್ನ ಕಣ್ಣುಗಳನ್ನೂ ದಾನ ಮಾಡಿ ಎಂದು ಬರೆದಿಟ್ಟು ಕೋಡಿಪಾಳ್ಯದ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಈ ಆತ್ಮಹತ್ಯೆ ನಿನ್ನೆ ನಡೆದಿದ್ದು, ಮನೆಯವರು ಕಣ್ಣನ್ನು ದಾನ ಮಾಡಿದ್ದಾರೆ. ಈ ಪ್ರಕರಣ ಇಂದು ಬೆಳಕಿಗೆ ಬಂದಿದೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.