ಮೊಬೈಲ್​ಫೋನ್​ ಸ್ಟೋರ್​ಗೆ ನುಗ್ಗಿ ಬಾಂಬ್​ ಸ್ಫೋಟಿಸುವುದಾಗಿ ಬೆದರಿಸಿದ!; ಯಾರವನು?

Delhi
Published on

ನವದೆಹಲಿ: ಮೊಬೈಲ್​ಫೋನ್​ ಶಾಪ್​​ವೊಂದಕ್ಕೆ ಆಗಂತುಕನೊಬ್ಬ ನುಗ್ಗಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಸಿ ಆತಂಕ ಸೃಷ್ಟಿಸಿದ ಪ್ರಕರಣವೊಂದು ನಡೆದಿದೆ. ದೆಹಲಿಯ ಕನ್ನಾಟ್​ ಪ್ರದೇಶದಲ್ಲಿ ಇಂದು ಸಂಜೆ ಈ ಪ್ರಕರಣ ನಡೆದಿದೆ.

ಸಂಜೆ 4 ಗಂಟೆ ಸುಮಾರಿಗೆ ಮೊಬೈಲ್​ಫೋನ್​ ಅಂಗಡಿಯೊಂದಕ್ಕೆ ನುಗ್ಗಿದ ಅಪರಿಚಿತನೊಬ್ಬ, ತನ್ನಲ್ಲಿ ಬಾಂಬ್ ಇದೆ, ಅದನ್ನು ಸಿಡಿಸುತ್ತೇನೆ ಎಂದು ಬೆದರಿಸಿದ್ದಾನೆ. ಕೂಡಲೇ ಅಂಗಡಿಯ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು.

ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಧಾವಿಸಿದ ದೆಹಲಿ ಪೊಲೀಸರು ಆತನನ್ನು ಉಪಾಯದಿಂದ ವಶಕ್ಕೆ ಪಡೆದಿದ್ದಾರೆ. ನಂತರ ಆತನ ತಪಾಸಣೆ ನಡೆಸಿದಾಗ ಬಾಂಬ್​ ಕಂಡು ಬಂದಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತೆಲ್ಲ ಪರಿಶೀಲನೆ ನಡೆಸಿದರೂ ಬಾಂಬ್​ ಸಿಕ್ಕಿಲ್ಲ. ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದ್ದು, ಆತನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net