ಜಿಲ್ಲೆ

5 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಪೊಲೀಸಪ್ಪನ ಪತ್ನಿ ದುರಂತ ಸಾವು: ಗರ್ಭಿಣಿ ಡೆತ್​ ಕೇಸ್​ ಮುಚ್ಚಿಹಾಕಲು ಹುನ್ನಾರ?

ಮೈಸೂರು: ನೂರಾರು ಕನಸಿನೊಂದಿಗೆ 5 ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತೆ ನಗರದ ಹೆಬ್ಬಾಳ ಪೊಲೀಸ್ ಬಡಾವಣೆಯಲ್ಲಿ ದುರಂತ ಅಂತ್ಯ ಕಂಡಿದ್ದಾಳೆ. ಸಾವಿಗೂ ಮುನ್ನ ಆಕೆ ಡೆತ್​ನೋಟ್​ ಬರೆದಿಟ್ಟಿದ್ದರೂ ಪ್ರಕರಣ ಮುಚ್ಚಿಹಾಕುವ ಹುನ್ನಾರ ಪೊಲೀಸ್​ ಇಲಾಖೆಯಲ್ಲೇ ನಡೆಯುತ್ತಿದೆ ಎಂಬ ಅನುಮಾನ ದಟ್ಟವಾಗಿದೆ.

ಪೊಲೀಸ್​ ಪೇದೆ ಮೋಹನ್ ಆರಾಧ್ಯ‌ರ ಪತ್ನಿ ಚೈತ್ರಾ (25) ಮೃತ ದುರ್ದೈವಿ. ಇವರಿಬ್ಬರ ಮದ್ವೆ 5 ತಿಂಗಳ ಹಿಂದಷ್ಟೇ ಆಗಿತ್ತು. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಮೋಹನ್​ ಕೆಲಸ ಮಾಡುತ್ತಿದ್ದಾರೆ. ಚೈತ್ರಾ 3 ತಿಂಗಳ ಗರ್ಭಿಣಿಯಾಗಿದ್ದಳು. ಇಂದು ಬೆಳಗ್ಗೆ ಗಂಡನಿಗೊಂದು ಪತ್ರ ಬರೆದಿಟ್ಟು ಚೈತ್ರಾ, ಸಾವಿನ ಮನೆಯ ಕದತಟ್ಟಿದ್ದಾಳೆ. ಇದನ್ನೂ ಓದಿರಿ ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಚೈತ್ರಾಳ ಡೆತ್​ನೋಟ್​ನಲ್ಲಿ ಏನಿದೆ?: 'ಮದುವೆಯಾದ ದಿನದಿಂದ ಮಾವ(ಗಂಡನ ತಂದೆ) ಸರಿಯಾಗಿ ಮಾತನಾಡಿಸಿಲ್ಲ. ನನ್ನ ತಂದೆ ಮತ್ತು ತಾಯಿಗೂ ಮಾವನಿಂದ ಗೌರವ ಸಿಕ್ಕಿಲ್ಲ. ತವರು ಮನೆಗೆ ಹೋಗುವ ವೇಳೆಯೂ ಅವರು ಅವಮಾನಿಸಿದರು' ಎಂದು ತನ್ನ ಗಂಡನಿಗೆ ಬರೆದ ಪತ್ರದಲ್ಲಿ ವಿವರಿಸಿರು ಚೈತ್ರಾ, 'ನಿಮ್ಮ ಅಪ್ಪನೇ ನನಗೆ ಹೀಗಾಗಲು ಕಾರಣ' ಎಂದು ದೂರಿದ್ದಾರೆ.

'ಅವರ ಇಷ್ಟದಂತೆ ನಾವು ಮದುವೆ ಮಾಡಿಕೊಟ್ಟಿಲ್ಲ ಎಂದು ನಿಮ್ಮ ತಂದೆ ಹೇಳಿದ್ದರು. ನಮ್ಮ ಮನೆಯವರು ಶಕ್ತಿಯಾನುಸಾರ ಮದುವೆ ಮಾಡಿದ್ದಾರೆ. ನನ್ನ ಈ ಸ್ಥಿತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ತಂದೆ ಮಲ್ಲಾರಾಧ್ಯ ಅವರೇ ಕಾರಣ' ಎಂದು ಆರೋಪಿಸಿದ್ದಾರೆ. ಇದನ್ನೂ ಓದಿರಿ ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

ಚೈತ್ರಾ ಆತ್ಕಹತ್ಯೆ ಕೇಸ್​ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ, ಹೊಟ್ಟೆ ನೋವಿನ ಕಾರಣಕ್ಕೆ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಮೃತಪಟ್ಟ ವೇಳೆ 3 ತಿಂಗಳ‌ ಗರ್ಭಿಣಿ. ಚೈತ್ರಾ ಪತಿ ಮೋಹನ್‌ ಆರಾಧ್ಯ ನಮ್ಮ ಇಲಾಖೆಯಲ್ಲಿ ಕಾನ್ಸ್‌ಸ್ಟೇಬಲ್. ಚೈತ್ರಾ ತಂದೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದೇವೆ. ಮದುವೆ ಆಗಿ 5 ತಿಂಗಳು ಆದ ಕಾರಣಕ್ಕೆ ತಹಸೀಲ್ದಾರ್ ಸಮ್ಮುಖದಲ್ಲಿ ಪಂಚನಾಮೆ ಮಾಡಿಸಿದ್ದೇವೆ. ನಮಗೆ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ ಎಂದಿದ್ದಾರೆ.

ಚೈತ್ರಾ ಬರೆದಿದ್ದ ಪತ್ರದ ಫೋಟೋ ವೈರಲ್ ಆಗಿದ್ದರೂ​ ಡಿಸಿಪಿ ಮಾತ್ರ ನಮಗೆ ಯಾವುದೇ ಪತ್ರ ಸಿಕ್ಕಿಲ್ಲ ಎಂದಿರುವುದು ಅನುಮಾನ ಮೂಡಿಸಿದೆ. ಪ್ರಕರಣ ಮುಚ್ಚಿಹಾಕುವ ಯತ್ನ ನಡೆಯುತ್ತಿದ್ದೆ ಎಂಬ ಆರೋಪ ಕೇಳಿಬಂದಿದೆ.