ಜಿಲ್ಲೆ

ಕಳ್ಳನೆಂದುಕೊಂಡು ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿಹಾಕಿ ಬಡಿದ ಜನರು!; ಆತನ ಜತೆಗಿದ್ದ ನಾಲ್ವರು ಪರಾರಿ...

ಬಾಗಲಕೋಟೆ: ಕೆಲವು ಕಳ್ಳರು ರೆಡ್​ ಹ್ಯಾಂಡೆಡ್​ ಸಿಕ್ಕಿಹಾಕಿಕೊಳ್ಳುತ್ತಾರೆ, ಮಾತ್ರವಲ್ಲ ಸಿಕ್ಕಿಬಿದ್ದು ಜನರಿಂದ ಪೆಟ್ಟು ಕೂಡ ತಿನ್ನುತ್ತಾರೆ. ಅಂಥ ಪ್ರಕರಣಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆ ಆಗಿದ್ದರೂ ಆಗಿರಬಹುದು. ಏಕೆಂದರೆ ಇಲ್ಲೊಬ್ಬ ಅಪರಿಚಿತ ವ್ಯಕ್ತಿಯನ್ನು ಕಳ್ಳನೆಂದು ಆರೋಪಿಸಿರುವ ಸ್ಥಳೀಯರು, ಆತನನ್ನು ಎಲೆಕ್ಟ್ರಿಕ್​ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಗದಗ ಜಿಲ್ಲೆಯವನು ಎನ್ನಲಾಗಿದೆ. ಅಮೀನಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಗದಗ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ. ಆರೋಪಿಯೊಂದಿಗೆ ಇನ್ನೂ ನಾಲ್ವರಿದ್ದರು ಎನ್ನಲಾಗಿದೆ. ಆರೋಪಿ ಸಿಕ್ಕಿ ಬೀಳುತ್ತಿದ್ದಂತೆ ಉಳಿದ ನಾಲ್ವರು ವಾಹನವೇರಿ ಪರಾರಿಯಾಗಿದ್ದಾರೆ. ಆರೋಪಿಯನ್ನು ಕಳ್ಳನೆಂದು ಭಾವಿಸಿರುವ ಸ್ಥಳೀಯರು ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಿಕ್ಕಿಹಾಕಿಕೊಂಡಿರುವ ಆರೋಪಿ ತಾನು ಕಳ್ಳತನಕ್ಕೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾನೆ. ಕಾಡುಹಂದಿ ಹಿಡಿಯಲು ಎಂದು ಬಂದಿದ್ದೆ, ಕಳವಿಗೆ ಬಂದಿಲ್ಲ ಎಂಬುದಾಗಿ ಹೇಳಿದ್ದಾನೆ. ಆದರೆ ಗುಡೂರ ಗ್ರಾಮದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಬಂದಿದ್ದು, ಆತ ಕಳ್ಳನೇ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆರೋಪದ ಸತ್ಯಾಸತ್ಯತೆ ತಿಳಿಯಲು ಗದಗ ಪೊಲೀಸರನ್ನು ಸ್ಥಳೀಯ ಪೊಲೀಸರು ಸಂಪರ್ಕಿಸಿದ್ದು, ಆರೋಪಿ ಮೇಲೆ ಕಳ್ಳತನದ ಆರೋಪಗಳು ಇವೆಯೇ ಎಂಬುದರ ಮಾಹಿತಿ ಕೋರಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.