

ಹಾನಗಲ್ಲ (ಹಾವೇರಿ): ತಾಲೂಕಿನ ಬೈಚವಳ್ಳಿ ಗ್ರಾಮ ಪಂಚಾಯಿತಿ ಜವಾನನಾಗಿರುವ ಬಸವರಾಜ ಕಿವಡೇರ ಅವರ ಪತ್ನಿ ಅದೇ ಗ್ರಾಪಂಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೈಚವಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗಂಗಮಾಳವ್ವ ಬಸವರಾಜ ಕಿವಡೇರ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಭರಮಪ್ಪ ಹಾನಗಲ್ಲ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷೆ ಗಂಗಮಾಳವ್ವ ಪತಿ ಬಸವರಾಜ ಕಿವಡೇರ 23 ವರ್ಷಗಳಿಂದ ಬೈಚವಳ್ಳಿ ಗ್ರಾಪಂನಲ್ಲಿ ಸಿಪಾಯಿ ಕೆಲಸ ಮಾಡುತ್ತಿದ್ದಾರೆ ಎಂಬುದು ವಿಶೇಷ. ಗ್ರಾಪಂನಲ್ಲಿ 12 ಸದಸ್ಯರಿದ್ದು, ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣಾಧಿಕಾರಿ ಹನುಮಂತಪ್ಪ ಓಕ್ಕಳಗೇರಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಹೆಸರು ಪ್ರಕಟಿಸಿದರು.