ಜಿಲ್ಲೆ

ಮುರ್ಡೇಶ್ವರದ ಮೇಲೆ ಉಗ್ರರ ಕಣ್ಣು?; ಐಸಿಸ್​ ಮ್ಯಾಗಜಿನ್​ನಲ್ಲಿ ರುಂಡರಹಿತ ಮುರ್ಡೇಶ್ವರನ ಫೋಟೋ!

ಕಾರವಾರ: ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭಟ್ಕಳ ತಾಲೂಕಿನ ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯನ್ನು ವಿಕೃತಗೊಳಿಸಿದ ಫೋಟೋವೊಂದನ್ನು ಐಸಿಸ್ ಮ್ಯಾಗಜಿನ್​ನ ಮುಖಪುಟಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಮಾಹಿತಿಯೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಐಸಿಸ್ ಮ್ಯಾಗಜೀನ್ 'ದಿ ವೈಸ್ ಆಫ್ ಹಿಂದ್'ನ ಕವರ್ ಪೇಜ್​ಗೆ ಮುರ್ಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ 'Its time to Break False Gods' ಎಂಬ ಬರಹ ಮುದ್ರಿಸಲಾಗಿದೆ. ಜೊತೆಗೆ ಶಿವನ ಪ್ರತಿಮೆಯ ರುಂಡ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ಧ್ವಜ ಹಾರಾಡುತ್ತಿರುವಂತೆ ವಿಕೃತಗೊಳಿಸಿದ ಚಿತ್ರ ಬಳಸಿಕೊಳ್ಳಲಾಗಿದೆ.

ಈ ಪೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಅನ್ಶುಲ್ ಸಕ್ಸೇನಾ ಎನ್ನುವವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು, ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆಯೇ ಐಸಿಸ್?

ಐಸಿಸ್ ಪ್ರಚಾರ ಮಾಸಿಕವಾಗಿರುವ ಆನ್‌ಲೈನ್ ನಿಯತಕಾಲಿಕೆ 'ವಾಯ್ಸ್ ಆಫ್ ಹಿಂದ್'ನ ಉತ್ಪಾದನೆ ಮತ್ತು ಪ್ರಸರಣದಲ್ಲಿ ಸಕ್ರಿಯ ಪಾತ್ರದ ಆರೋಪದಲ್ಲಿ ಭಟ್ಕಳದಲ್ಲಿ ಈ ವರ್ಷದ ಆಗಸ್ಟ್​ನಲ್ಲಿ ಜಫ್ರಿ ಜವಾಹರ್ ದಾಮುದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಜ್ಯ ಪೊಲೀಸರ ನೇತೃತ್ವದ ಸಂಘಟಿತ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.

ಈತನ ಮೇಲೆ ಏಪ್ರಿಲ್ 2020ರಿಂದ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ಇರಿಸಿದ್ದವು. ಐಸಿಸ್ ಪ್ರಚಾರ ಮತ್ತು ಮಾಧ್ಯಮ ಚಟುವಟಿಕೆಗಳ ಹೊರತಾಗಿ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಖರೀದಿ, ಮುಜಾಹಿದ್ದೀನ್‌ಗಳಿಗೆ ನಿಧಿಸಂಸ್ಥೆ ಮತ್ತು ನೇಮಕಾತಿ ಸೇರಿ ಲಾಜಿಸ್ಟಿಕಲ್ ಬೆಂಬಲವನ್ನು ಈತ ನೋಡಿಕೊಂಡಿದ್ದ.