ಸಾಂದರ್ಭಿಕ ಚಿತ್ರ 
ಜಿಲ್ಲೆ

ಕಾಡುಹಂದಿ ಎಂದು ಭಾವಿಸಿ ದಾಳಿ: ಸಹಚರನ ಗುಂಡೇಟಿಗೆ ಯುವಕ ಬಲಿ..

Webdesk - Ravikanth

ಹಗರೆ (ಹಳೇಬೀಡು): ವೀರದೇವನಹಳ್ಳಿ-ಚನ್ನಲ್ಲಿಕಟ್ಟೆ ವ್ಯಾಪ್ತಿಯಲ್ಲಿ ಭಾನುವಾರ ಕಾಡುಹಂದಿಯನ್ನು ಬೇಟೆಯಾಡಲು ತೆರಳಿದ್ದ ಗುಂಪಿನ ಸದಸ್ಯನೊಬ್ಬ ಮತ್ತೊಬ್ಬ ಸಹಚರನನ್ನು ಹಂದಿ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿದ ಪರಿಣಾಮ ಆತ ಮೃತಪಟ್ಟಿದ್ದಾನೆ.

ಬಿಕ್ಕೊಡು ಹೋಬಳಿಯ ಕುಶವಾರ ಗ್ರಾಮದ ಮದನ್ (24) ಗುಂಡಿಗೆ ಬಲಿಯಾದ ಯುವಕ. ಭಾನುವಾರ ಸಂಜೆ ನಾಲ್ವರಿದ್ದ ಗುಂಪೊಂದು ಅರಣ್ಯ ಪ್ರದೇಶಕ್ಕೆ ಕಾಡುಹಂದಿಯನ್ನು ಬೇಟೆಯಾಡಲು ತೆರಳಿತ್ತು. ರಾತ್ರಿಯಾಗುತ್ತಿದ್ದಂತೆ ಬೇಟೆ ಪ್ರಾರಂಭಿಸಿದ ಗುಂಪಿನ ಸದಸ್ಯರು ಸ್ವಲ್ಪ ಸಮಯದಲ್ಲೇ ಗುಂಪಿನಿಂದ ಬೇರ್ಪಟ್ಟಿದ್ದರು. ಈ ವೇಳೆ ಒಬ್ಬ ಸಹಚರ ಹಂದಿ ಹುಡುಕುವ ಭರದಲ್ಲಿ ಸ್ವಲ್ಪ ದೂರದಲ್ಲೇ ಪೊದೆಮಧ್ಯೆ ಸಾಗುತ್ತಿದ್ದ ಯುವಕ ಮದನ್‌ನನ್ನು ಹಂದಿ ಎಂದು ಭಾವಿಸಿ ಗುರಿ ಇಟ್ಟು ಗುಂಡು ಹೊಡೆದಿದ್ದಾನೆ. ಗುಂಡೇಟಿನಿಂದ ಯುವಕ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.

ಇದನ್ನು ಕಂಡ ಇತರರು ಓಡಿಬಂದು ಗಾಯಾಳು ಮದನ್‌ನನ್ನು ತಾವು ತಂದಿದ್ದ ವಾಹನದಲ್ಲೇ ಸಾಗಿಸಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟುಹೊತ್ತ್ತಿಗಾಗಲೇ ಯುವಕ ಮೃತಪಟ್ಟಿದ್ದ. ತಕ್ಷಣ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಹಳೇಬೀಡು ಪೊಲೀಸ್ ಠಾಣೆಯ ಪಿಎಸ್‌ಐ ಗಿರಿಧರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.