ಜಿಲ್ಲೆ

ಸರ್ಕಾರಿ ಆಸ್ಪತ್ರೆಗೆ ಸ್ವಂತ ಖರ್ಚಿನಲ್ಲಿ ಬೆಡ್​ ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಪರಿಕರ ವಿತರಿಸಿದ ಸಚಿವ ಎಂಟಿಬಿ ನಾಗರಾಜ್​

ಬೆಂಗಳೂರು ಗ್ರಾಮಾಂತರ: ಪ್ರಸ್ತುತ ಪರಿಸ್ಥಿತಿಯಲ್ಲಿ ಕರೊನಾ ಸೋಂಕು ಹತೋಟಿಗೆ ಮತ್ತಷ್ಟು ದಿನ ಲಾಕ್‌ಡೌನ್ ಮುಂದುವರಿಸಿರುವುದು ಸ್ವಾಗತರ್ಹ ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.

ಹೊಸಕೋಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಸ್ವಂತ ಖರ್ಚಿನಲ್ಲಿ ಮೆಡಿಕಲ್ ಕಿಟ್ ಹಾಗೂ 11 ಬೆಡ್ ಸೇರಿ ಲಕ್ಷಾಂತರ ರೂ. ಮೌಲ್ಯದ ವಿವಿಧ ಪರಿಕರ ವಿತರಿಸಿ ಮಾತನಾಡಿದರು.

ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ, ಈಗಾಗಲೇ ಸಲಹಾ ಸಮಿತಿ ಹಾಗೂ ತಜ್ಞರು ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಸಿಎಂಗೆ ವರದಿ ನೀಡಿದ್ದರು. ಜತೆಗೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸಿಎಂಗೆ ಒತ್ತಾಯಿಸಿದ್ದರು. ಹೀಗಾಗಿ ಒಂದು ವಾರ ಲಾಕ್‌ಡೌನ್ ಮುಂದುವರಿಸಿದರೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವೂ ಆಗಿತ್ತು ಎಂದರು.

ಲಾಕ್‌ಡೌನ್ ಬಳಿಕ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಅಲ್ಲದೆ ಸೋಂಕಿತರಿಗೆ ಅವಶ್ಯವಿರುವ ಪರಿಕರ ಒದಗಿಸಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಕರೊನಾ ಸಂಪೂರ್ಣ ಹತೋಟಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರೊನಾ ಮೆಡಿಕಲ್ ಕಿಟ್ ಕೊರತೆ ಇದ್ದಿದ್ದರಿಂದ ಸೋಂಕಿತರಿಗೆ ಸಮಸ್ಯೆಯಾಗದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸ್ವಂತ ದುಡ್ಡಿನಲ್ಲಿ ಔಷಧ ಕಿಟ್ ಒದಗಿಸಲಾಗಿದೆ. ಈಗಾಗಲೇ ಹೊಸಕೋಟೆ ನಗರದಲ್ಲಿ ಕಡು ಬಡವರು, ನಿರ್ಗತಿಕರು, ದುರ್ಬಲ ವರ್ಗದ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಡ್ ಕೊರತೆ ನೀಗಿಸಲು ಕ್ರಮ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್ ಕೊರತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ವಂತ ಹಣದಲ್ಲಿ ಕೂಡಲೇ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಬಿಸಿ ನೀರಿನ ವಾಟರ್ ಫಿಲ್ಟರ್, ಬಟ್ಟೆ ಒಗೆಯಲು ವಾಷಿಂಗ್ ಮಷಿನ್, ಫ್ಯಾನ್ ಮತ್ತಿತರ ಸೌಕರ್ಯ ಒದಗಿಸಲಾಗಿದೆ ಎಂದರು.

ಸಿಬ್ಬಂದಿಗೆ ಶಹಬ್ಬಾಸ್ ಗಿರಿ: ಹೊಸಕೋಟೆ ತಾಲೂಕಿನ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಚಿವ ಎಂಟಿಬಿ ನಾಗರಾಜ್ ಶಹಬ್ಬಾಸ್ ಗಿರಿ ನೀಡಿದರು.

ಕರೊನಾ ನಿರ್ವಹಣೆಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮವಾಗಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗುತ್ತಿದೆ. ಇವರೆಲ್ಲರ ಪರಿಶ್ರಮದಿಂದ ಕರೊನಾ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಬಡವರ ಸಂಕಷ್ಟಕ್ಕೆ ಮಿಡಿದ ಸರ್ಕಾರ: ಲಾಕ್‌ಡೌನ್ ವೇಳೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರ ನೆರವಿಗೆ ಮುಂದಾದ ರಾಜ್ಯ ಸರ್ಕಾರ ಈಗಾಗಲೇ ಪ್ಯಾಕೇಜ್ ಘೋಷಿಸಿದ್ದು, ಅರ್ಹರ ಖಾತೆಗೆ ಹಣ ಜಮೆಯಾಗುವ ಪ್ರಕ್ರಿಯೆ ಆರಂಭವಾಗಿದೆ ಎಂದು ಎಂಟಿಬಿ ತಿಳಿಸಿದರು.

ಬಡವರು, ನಿರ್ಗತಿಕರು, ಕೂಲಿಕಾರ್ಮಿಕರು ಸೇರಿ ಸಾವಿರಾರು ಜನರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಈಗಾಗಲೇ ಉಚಿತವಾಗಿ ಊಟ, ಉಪಾಹಾರ ಪೂರೈಕೆಯಾಗುತ್ತಿದ್ದು, ಎಲ್ಲ ಕಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಕೋವಿಡ್ ನಿರ್ವಹಣೆಯಲ್ಲಿ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೈಜೋಡಿಸಿರುವುದರಿಂದ ತಾಲೂಕಿನಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ ಎಂದರು.