ಶಾಸಕ ಮಂಕಾಳ ವೈದ್ಯ ಅವರು ಗಂಗೊಳ್ಳಿ ಗಣೇಶ ಕಿಣಿ ಅವರನ್ನು ಅಭಿನಂದಿಸಿದರು. 
ಜಿಲ್ಲೆ

ಮಂಕಾಳ ವೈದ್ಯ ಗೆಲುವಿನ ಹರಕೆ ತೀರಿಸಿದ ಯುವಕ

ಗಂಗೊಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಆರಿಸಿ ಬರಬೇಕು ಎಂದು ಹರಕೆ ಹೊತ್ತಿದ್ದ ಗಂಗೊಳ್ಳಿಯ ಗಣೇಶ ಕಿಣಿ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ಭಾನುವಾರ ಹರಕೆ ತೀರಿಸಿದ ಘಟನೆ ಬೆಳಕಿಗೆ ಬಂದಿದೆ.

ಈ ಬಾರಿ ಚುನಾವಣೆಯಲ್ಲಿ ಮಂಕಾಳ ವೈದ್ಯ ಗೆಲುವು ಸಾಧಿಸಿದರೆ ಗಂಗೊಳ್ಳಿಯಿಂದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ತನಕ ಪಾದಯಾತ್ರೆ ಮಾಡುವುದಾಗಿ ಹರಕೆ ಹೊತ್ತಿದ್ದರು. ಅವರು ಗೆಲುವು ಸಾಧಿಸುತ್ತಲೇ ತಮ್ಮ ಹರಕೆ ತೀರಿಸಿ ಪ್ರಸಾದವನ್ನು ಮುರ್ಡೇಶ್ವರದ ಮಂಕಾಳ ವೈದ್ಯರಿಗೆ ತಲುಪಿಸಿದ್ದಾರೆ. ಉಡುಪಿ ಜಿಲ್ಲೆ ಯುವಕನೊಬ್ಬ ಹೊಂದಿದ್ದ ವಿಶ್ವಾಸಕ್ಕೆ ಮಾರು ಹೋಗಿ ಬೆಂಗಳೂರಿಗೆ ಹೋಗುವ ತವಕದಲ್ಲಿದ್ದರೂ ಮನೆಗೆ ಬಂದ ಗಣೇಶ ಕಿಣಿ ಅವರನ್ನು ಸಂತೋಷದಿಂದ ಮಾತನಾಡಿಸಿ ಊಟ ಕೊಟ್ಟು, ಅಭಿನಂದಿಸಿ ಬೀಳ್ಕೊಟ್ಟಿದ್ದಾರೆ.

ಗಣೇಶ ಕಿಣಿ ಮಾತನಾಡಿ, ಪಕ್ಷ ಯಾವುದೇ ಇರಲಿ, ಮಂಕಾಳ ವೈದ್ಯ ಅವರ ದಾನ ಧರ್ಮ, ಹಿಂದುತ್ವ ಹಾಗೂ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನೀಡಿದ ಕೊಡುಗೆ ಹಾಗೂ ಅವರ ವ್ಯಕ್ತಿತ್ವ ಮೆಚ್ಚಿಕೊಂಡಿದ್ದೆ. ಕಳೆದ ಬಾರಿ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಜಯ ಸಿಕ್ಕಿ, ಯಾವುದೇ ಅಡೆತಡೆ ಬಾರದಿರಲಿ ಎಂದು ಪಾದಯಾತ್ರೆ ನಡೆಸುವ ಹರಕೆ ಹೊತ್ತುಕೊಂಡಿದ್ದೆ ಎಂದರು.