ಜಿಲ್ಲೆ

ಸಾಲವಾಗಿ ಪಡೆದಿದ್ದ 5 ಸಾವಿರ ರೂ. ವಾಪಸ್ ಕೊಡಲಿಲ್ಲವೆಂದು ಕತ್ತನ್ನೇ ಸೀಳಿ ಹಾಕಿದ..!

ಮೈಸೂರು: ಇವರಿಬ್ಬರ ಹಣಕಾಸಿನ ಜಗಳ ಬೆಳೆದು ಕತ್ತು ಸೀಳಿ ಹಾಕುವವರೆಗೂ ಮುಂದುವರಿದಿದೆ. ಮೈಸೂರು ಜಿಲ್ಲೆ ನಂಜನಗೂಡಿನ ಸೂರಳ್ಳಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ರೇವಣ್ಣ ಎಂಬಾತನ ಕುತ್ತಿಗೆ ಕೊಯ್ದು ಹೋಗಿದ್ದು, ಮಹದೇವಸ್ವಾಮಿ ಎಂಬಾತನ ವಿರುದ್ಧ ಕೊಲೆಯತ್ನ ಆರೋಪ ಹೊರಿಸಲಾಗಿದೆ.

ರೇವಣ್ಣ ತನ್ನ ಸ್ನೇಹಿತ ಮಹದೇವಸ್ವಾಮಿ ಜತೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್​ ಕೆಲಸಕ್ಕೆ ಸೇರಿದ್ದ. ಈ ಸಂದರ್ಭದಲ್ಲಿ 5 ಸಾವಿರ ರೂ. ಸಾಲ ಕೂಡ ಪಡೆದಿದ್ದ. ನಂತರ ತಂದೆ ತೀರಿಹೋದ ಕಾರಣಕ್ಕೆ ಊರಿಗೆ ಬಂದಿದ್ದ ರೇವಣ್ಣ, ಊರಿನಲ್ಲಿ ಕೃಷಿ ಮಾಡಲು ಯಾರೂ ಇಲ್ಲದ್ದರಿಂದ ಬೆಂಗಳೂರಿಗೆ ಬಂದಿರಲಿಲ್ಲ.

ಈ ಮಧ್ಯೆ ಕೆಲಸಕ್ಕೆ ಬರುವಂತೆ ಅಥವಾ ಹಣ ನೀಡುವಂತೆ ರೇವಣ್ಣನನ್ನು ಮಹದೇವಸ್ವಾಮಿ ಹಲವಾರು ಬಾರಿ ಒತ್ತಾಯಿಸಿದ್ದ. ಆದರೆ ಕೆಲಸಕ್ಕೆ ಬರಲು ಆಗುವುದಿಲ್ಲ, ಹಣ ಸ್ವಲ್ಪ ದಿನ ಬಿಟ್ಟು ಕೊಡುತ್ತೇನೆ ಎಂದು ರೇವಣ್ಣ ಭರವಸೆ ನೀಡಿದ್ದ.

ಮನೆ ಬಳಿಯ ಶಾಲೆ ಹತ್ತಿರ ಬಾ ಎಂದು ಕರೆಸಿಕೊಂಡಿದ್ದ ಮಹದೇವಸ್ವಾಮಿ, ರೇವಣ್ಣನ ಕುತ್ತಿಗೆಗೆ ಹರಿತವಾದ ಆಯುಧದಿಂದ ಎರಡು ಸಲ ಬೀಸಿದ್ದಾನೆ, ಇದರಿಂದ ಆತನ ಕುತ್ತಿಗೆ ಎರಡು ಸೀಳಿಹೋಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ರೇವಣ್ಣ ಆಸ್ಪತ್ರೆಗೆ ದಾಖಲಾಗಿದ್ದು, ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.