ಜಿಲ್ಲೆ

ಲೇಡಿ ಕಾನ್​​ಸ್ಟೆಬಲ್​ ಹೃದಯಾಘಾತದಿಂದ ಸಾವು; 2021ರಲ್ಲಿ ಪತಿ ಕರೊನಾಗೆ ಬಲಿ, ಈಗ ಒಂದೂವರೆ ವರ್ಷದ ಮಗು ಅನಾಥ

ಬೆಂಗಳೂರು: ಕೆಂಗೇರಿ ಸಂಚಾರಿ ಠಾಣಾ ಸಿಬ್ಬಂದಿ ಪ್ರಿಯಾಂಕಾ ಹೃದಯಾಘಾತದಿಂದ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮೂಲದ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಪ್ರಿಯಾಂಕಾ ಮೃತಪಟ್ಟವರು.

ಪ್ರಿಯಾಂಕ ಅವರು ಆರೋಗ್ಯ ಸರಿ ಇರಲಿಲ್ಲವೆಂದು ಜೂ.17ರಿಂದ ರಜೆಯಲ್ಲಿದ್ದರು. ಭಾನುವಾರ ನಗರದಿಂದ ತಮ್ಮ ಊರಾದ ಅಜ್ಜಂಪುರಕ್ಕೆ ತೆರಳಿದ್ದರು. ರಾತ್ರಿ 11.30ರ ಸಮಯದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಪ್ರಿಯಾಂಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸ್ ಕಾನ್‌ಸ್ಟೆಬಲ್ ಕೆಲಸಕ್ಕೆ 2018ರಲ್ಲಿ ನೇಮಕವಾಗಿದ್ದರು. ಅದೇ ವರ್ಷ ಮದುವೆ ಕೂಡ ಆಗಿದ್ದರು. ಆದರೆ 2021ರ ಕರೋನಾ ಸಂದರ್ಭದಲ್ಲಿ ಪ್ರಿಯಾಂಕಾ ಪತಿ ಸಾವಿಗೀಡಾಗಿದ್ದರು. ಪತಿ ಸಾವಿನ ವೇಳೆ ಒಂದು ತಿಂಗಳ ಗರ್ಭಿಣಿಯಾಗಿದ್ದರು. ಒಂದು ವರ್ಷ ಏಳು ತಿಂಗಳ ಮಗುವನ್ನು ಬಿಟ್ಟು ಪ್ರಿಯಾಂಕ ಅಗಲಿದ್ದಾರೆ. ಪ್ರಿಯಾಂಕಾ ಅವರ ಸಾವಿಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಂಬಿನಿ ಮಿಡಿದಿದ್ದಾರೆ.