ಜಿಲ್ಲೆ

ಮಗಳು ರೇಪ್​ ಆರೋಪ ಹೊರಿಸಿದ್ದಕ್ಕೆ ಮನನೊಂದು ತಂದೆ ಆತ್ಮಹತ್ಯೆ: ಡೆತ್​ನೋಟ್​ನಲ್ಲಿತ್ತು ನೋವಿನ ಮಾತು!

ಮಡಿಕೇರಿ: ಹೆತ್ತ ಮಗಳೇ ಅತ್ಯಾಚಾರ ಆರೋಪ ಮಾಡಿದ್ದಕ್ಕೆ ಮನನೊಂದ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ಮರಗೋಡು ಗ್ರಾಮದಲ್ಲಿ ನಡೆದಿದೆ.

ಪುದಿಯೊಕ್ಕಡ ಭರತ್(55) ಮೃತ ವ್ಯಕ್ತಿ. ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಪತ್ನಿ ಹಾಗೂ ಹಿರಿಯ ಮಗಳೇ ಕಾರಣ. ಅತ್ಯಾಚಾರ ಆರೋಪ ಮಾಡಿ ನನ್ನನ್ನು ಜೈಲಿಗೆ ಅಟ್ಟಿದರು. ನಾನು ಆರೋಪ ಮುಕ್ತನಾಗಿ ಬಂದರೂ ಸಹ ನೆಮ್ಮದಿಯಿಂದ ಬದುಕಲು ಬಿಡಲಿಲ್ಲ ಎಂದು ಬರೆದಿದ್ದಾರೆ.

ಡಿವೋರ್ಸ್​ಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ನನ್ನ ಪತ್ನಿ ಹಣ ಮತ್ತು ಆಸ್ತಿಗೆ ಬೇಡಿಕೆ ಇಟ್ಟಿದ್ದಾಳೆ. ನನ್ನ ಬಳಿ ಯಾವುದೇ ಆಸ್ತಿ ಇಲ್ಲ. ಬೇರೆ ದಾರಿ ಕಾಣದೇ ನಾನು ಆತ್ಮಹತ್ಯೆ ದಾರಿ ಹಿಡಿದಿದ್ದೇನೆ. ಅತ್ಯಾಚಾರ ಕಳಂಕ ಹೊತ್ತುಕೊಂಡು ಬದುಕುವುದು ಕಷ್ಟ. ಅತ್ಯಾಚಾರ ಪ್ರಕರಣದಲ್ಲಿ ನಮ್ಮ ದೇಶದ ಕಾನೂನು ಬದಲಾಗಬೇಕೆಂದು ಡೆತ್​ನೋಟ್​ನಲ್ಲಿ ಮನವಿ ಮಾಡಿದ್ದಾರೆ.

ಅಂದಹಾಗೆ ಭರತ್​ ಅವರ ಪುತ್ರಿ ಮೇಘ ತಂದೆಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದರು. ಕೋರ್ಟ್​ನಲ್ಲಿ ಆರೋಪ ಮುಕ್ತರಾಗಿ ಬಂದಿದ್ದರು. ಆದರೆ, ತನ್ನನ್ನು ಸಮಾಜ ಅತ್ಯಾಚಾರಿಯಂತೆ ನೋಡುತ್ತದೆ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)