ಜಿಲ್ಲೆ

ಡಿಸಿಪಿಗೇ ಸ್ಟಿಂಗ್ ಆಪರೇಷನ್​ ಮಾಡಲೆತ್ನಿಸಿದ್ದ ಎಸ್​​ಐ​; ಅಮಾಯಕನ ಮೇಲೆ ಗಾಂಜಾ ಕೇಸ್​ ಹಾಕಿದ್ದ ಲೇಡಿ ಇನ್​ಸ್ಪೆಕ್ಟರ್!

Webdesk - Ravikanth

ಬೆಂಗಳೂರು: ಮಹಿಳಾ ಇನ್​ಸ್ಪೆಕ್ಟರ್​ವೊಬ್ಬರು ಮನೆ ಮುಂದೆ ಕೂತಿದ್ದವನನ್ನು ಕರೆದುಕೊಂಡು ಬಂದು ಗಾಂಜಾ ಸೇದಿಸಿ, ಕೇಸ್ ಜಡಿದಿದ್ದರೆ, ಎಸ್​​ಐ ಒಬ್ಬರು ಈ ಸಂಬಂಧದ ತನಿಖೆ ವೇಳೆ ಡಿಸಿಪಿಯನ್ನೇ ಸ್ಟಿಂಗ್ ಆಪರೇಷನ್​ ಮಾಡಲು ಹೋಗಿದ್ದರು. ಇದೀಗ ಇಬ್ಬರ ಮೇಲಿನ ಆರೋಪ ಇಲಾಖೆಯ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ.

ಆರ್​ಎಂಸಿ ಯಾರ್ಡ್ ಪೊಲೀಸ್ ಇನ್​ಸ್ಪೆಕ್ಟರ್​ ಪಾರ್ವತಮ್ಮ ಹಾಗೂ ಸಬ್​ ಇನ್​ಸ್ಪೆಕ್ಟರ್​ ಅಂಜಿನಪ್ಪ ವಿರುದ್ಧ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆದಿದೆ. ಪಾರ್ವತಮ್ಮ, ಅಂಜಿನಪ್ಪ ಹಾಗೂ ಇಬ್ಬರು ಸಿಬ್ಬಂದಿ ಸೇರಿ ನಾಲ್ವರು ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೆಚ್ಚುವರಿ ಆಯುಕ್ತ ಎಸ್. ಮುರುಗನ್ ತಿಳಿಸಿದ್ದಾರೆ.

ಜುಲೈ 14ರಂದು ಗಸ್ತಿನಲ್ಲಿದ್ದ ಇನ್​​ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಎಸ್​ಐ ಅಂಜಿನಪ್ಪ ಅವರು ಶಿವರಾಜ್​ ಹಾಗೂ ನಾಗೇಂದ್ರ ಎಂಬವರನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭ ನಾಗೇಂದ್ರನ ಮೇಲೆ ಪೆಟ್ಟಿ ಕೇಸ್​ ಹಾಕಿದ್ದ ಇವರು, ಶಿವರಾಜ್​ ಗಾಂಜಾಮಿಶ್ರಿತ ಸಿಗರೇಟ್​ ಬಲವಂತವಾಗಿ ಸೇದುವಂತೆ ಮಾಡಿ ಆತನ ವಿರುದ್ಧ ಗಾಂಜಾ ಕೇಸ್ ದಾಖಲಿಸಿದ್ದರು. ಇದರಿಂದ ನೊಂದಿದ್ದ ಜುಲೈ 17ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ಜುಲೈ 19ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲಿ ಇನ್​ಸ್ಪೆಕ್ಟರ್ ಹಾಗೂ ಎಸ್​​ಐ ವಿರುದ್ಧ ಆರೋಪ ಬಂದಿದ್ದರಿಂದ ಆಂತರಿಕ ತನಿಖೆ ನಡೆಸಲಾಗಿದೆ ಎಂದು ಮುರುಗನ್ ತಿಳಿಸಿದ್ದಾರೆ.

ಮನೆಮುಂದೆ ಕೂತಿದ್ದ ಶಿವರಾಜ್​ನನ್ನು ಜೀಪ್​ನಲ್ಲಿ ಕರೆತಂದಿದ್ದ ಇನ್​ಸ್ಪೆಕ್ಟರ್ ಪಾರ್ವತಮ್ಮ, ಗಾಂಜಾ ಸೇದಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆತ ಸೇವನೆ ಮಾಡಿಲ್ಲ ಎಂದಿದ್ದಾಗ ಸಿಗರೇಟ್​ಗೆ ಗಾಂಜಾ ಸೇರಿಸಿ, ಗಾಂಜಾ ಸೇವನೆ ಮಾಡದಿದ್ದರೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸಿ ಸೇದಿಸಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿ ಗಾಂಜಾ ಸೇವನೆ ಆರೋಪ ಹೊರಿಸಿ ಕೇಸ್ ದಾಖಲಿಸಿದ್ದರು. ಇದರಿಂದ ನೊಂದಿದ್ದ ಶಿವರಾಜ್​ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ಡಿಸಿಪಿ ಧರ್ಮೇಂದ್ರ ಅವರು ನಡೆಸಿದ್ದ ಆತಂರಿಕ ತನಿಖೆಯಲ್ಲಿ ಕಂಡುಬಂದಿದೆ.

ಡಿಸಿಪಿಗೇ ಸ್ಟಿಂಗ್ ಆಪರೇಷನ್​: ಈ ಪ್ರಕರಣದ ಆತಂರಿಕ ತನಿಖೆ ವೇಳೆ ಡಿಸಿಪಿಯನ್ನೇ ಸ್ಟಿಂಗ್ ಆಪರೇಶನ್ ಮಾಡಿ ಸಿಕ್ಕಿ ಹಾಕಿಸಲು ಯತ್ನಿಸಿದ್ದ ಎಸ್​ಐ ಅಂಜಿನಪ್ಪ ಸಿಕ್ಕಿಹಾಕಿಕೊಂಡಿದ್ದಾನೆ. ತಮ್ಮ ಕಚೇರಿಗೆ ಕರೆಸಿ ಮಾಹಿತಿ ಪಡೆಯುತ್ತಿದ್ದ ವೇಳೆ, ಅಂಜಿನಪ್ಪ ಅನುಮಾನಾಸ್ಪದವಾಗಿ ವರ್ತಿಸಿದ್ದ. ಇದನ್ನು ಗಮನಿಸಿದ ಡಿಸಿಪಿ ಬೇರೆ ಸಿಬ್ಬಂದಿಯಿಂದ ತಪಾಸಣೆ ಮಾಡಿಸಿದ್ದಾಗ, ಅಂಜಿನಪ್ಪ ಮೊಬೈಲ್​ಫೋನ್​ನಿಂದ ಆಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಲು ಯತ್ನಿಸಿದ್ದು ಕಂಡುಬಂದಿದೆ. ಸದ್ಯ ಇನ್​ಸ್ಪೆಕ್ಟರ್​, ಎಸ್​ಐ ಹಾಗೂ ಇಬ್ಬರು ಸಿಬ್ಬಂದಿ ವಿರುದ್ಧ ನಡೆದಿರುವ ಆಂತರಿಕ ತನಿಖೆಯ ವರದಿಯನ್ನು ಡಿಸಿಪಿ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಿದ್ದಾರೆ.