More

    ಇವರು ಸಾಮಾನ್ಯ ಖದೀಮರಲ್ಲ; ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿದ್ದರು, ತಮ್ಮದೇ ಹೆಸರಲ್ಲಿ 50 ಖಾತೆ ತೆರೆದಿದ್ದರು!

    ಬೆಳಗಾವಿ: ಇವರು ಸಾಮಾನ್ಯ ಖದೀಮರಲ್ಲ. ಯಾಕೆಂದರೆ ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿದ್ದರು, ಮಾತ್ರವಲ್ಲ.. ತಮ್ಮದೇ ಹೆಸರುಗಳಲ್ಲಿ 50 ಖಾತೆಗಳನ್ನು ತೆರೆದಿದ್ದರು. ಇಂಥ ಮೂವರು ಖದೀಮರು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಜಾರ್ಖಂಡ್​ ಮೂಲದ ಜಾಮ್‌ತಾರಾ ಜಿಲ್ಲೆಯ ದಂಪತಿ ಆಶಾ (25), ಚಂದ್ರಪ್ರಕಾಶ ದಾಸ್ (30) ಹಾಗೂ ನಾಸಿಕದ ಅನ್ವರ್ ಅಕ್ಬರ್‌ ಶೇಖ್​ (24) ಬಂಧಿತರು.

    ಬೆಳಗಾವಿ ಪೊಲೀಸರು ಈ ಮೂವರನ್ನು ಪತ್ತೆ ಮಾಡಿ ಬಂಧಿಸಿದ್ದು, ಕಾರ್ಯಾಚರಣೆ ಹಾಗೂ ಬಂಧಿತರ ಕುರಿತು ಡಿಸಿಪಿ ಡಾ. ವಿಕ್ರಮ್ ಅಮಟೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಂಧಿತರಿಂದ ಒಟ್ಟು 12.56 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಹಣ ಕಳೆದುಕೊಂಡ ದೂರುದಾರರಿಗೆ ಕಾನೂನಾತ್ಮಕವಾಗಿ ನೀಡಲಾಗುತ್ತದೆ ಎಂದರು.

    ಈ ಆರೋಪಿಗಳು ಜೂನ್​ 9ರಂದು ಕಂಗ್ರಾಳಿ ಕೆ.ಎಚ್.ಗ್ರಾಮದ ನಿವಾಸಿ, ಬಿಎಸ್‌ಎನ್‌ಎಲ್ ನಿವೃತ್ತ ನೌಕರ ಯಲ್ಲಪ್ಪ ನಾರಾಯಣ ಜಾಧವ್ ಅವರಿಗೆ ಕರೆ ಮಾಡಿ, ಕೆವೈಸಿ ಅಪ್ಡೇಟ್ ಮಾಡುವ ನೆಪದಲ್ಲಿ ಲಿಂಕ್ ಬಳಸಲು ತಿಳಿಸಿ, ಒಟಿಪಿ ಪಡೆದಿದ್ದರು. ಬಳಿಕ ಬರೋಬ್ಬರಿ 102 ಬಾರಿ ಅವರ ಖಾತೆಗೆ ಕನ್ನ ಹಾಕಿ 10 ಲಕ್ಷ ರೂಪಾಯಿ ಎಗರಿಸಿದ್ದರು. ಮೋಸ ಹೋಗಿರುವುದು ತಿಳಿದ ಯಲ್ಲಪ್ಪ ಅವರು ಈ ಬಗ್ಗೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜೂ.10ರಂದು ದೂರು ದಾಖಲಿಸಿ, ವಿವರಣೆ ನೀಡಿದ್ದರು.

    ಇವರು ಸಾಮಾನ್ಯ ಖದೀಮರಲ್ಲ; ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿದ್ದರು, ತಮ್ಮದೇ ಹೆಸರಲ್ಲಿ 50 ಖಾತೆ ತೆರೆದಿದ್ದರು!
    ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಡಾ.ವಿಕ್ರಮ್ ಅಮಟೆ, ಇನ್​ಸ್ಪೆಕ್ಟರ್​ ಬಿ.ಆರ್​.ಗಡ್ಡೇಕರ್​.

    ಇನ್​ಸ್ಪೆಕ್ಟರ್​ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಪೇದೆಗಳಾದ ವಿಜಯ ಬಡವಣ್ಣವರ, ಮಾರುತಿ ಕನ್ಯಾಗೋಳ, ಕೆ.ವಿ.ಚರಲಿಂಗಮಠ ಹಾಗೂ ಭುವನೇಶ್ವರಿ ಸೇರಿ ಇನ್ನೂ ಹಲವರನ್ನೊಳಗೊಂಡ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಜು.15ರಂದು ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ ಸಾಕಷ್ಟು ಮಾಹಿತಿ ತಿಳಿದು ಬಂದಿದೆ ಎಂದು ಡಿಸಿಪಿ ಹೇಳಿದ್ದಾರೆ.

    ಇವರು ಸಾಮಾನ್ಯ ಖದೀಮರಲ್ಲ; ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿದ್ದರು, ತಮ್ಮದೇ ಹೆಸರಲ್ಲಿ 50 ಖಾತೆ ತೆರೆದಿದ್ದರು!
    ಪೊಲೀಸರ ವಶದಲ್ಲಿ ಆರೋಪಿಗಳು.

    ಮೂವರು ಆರೋಪಿಗಳು ತಮ್ಮ ಹೆಸರಲ್ಲಿ ಈವರೆಗೆ ಒಟ್ಟು 50 ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಅದನ್ನು ವಂಚನೆಗೆ ಬಳಸುತ್ತಿದ್ದರು. ಅಲ್ಲದೆ ಸಾರ್ವಜನಿಕರನ್ನು ವಂಚಿಸಲು 48 ಮೊಬೈಲ್ ಫೋನ್​, 304 ಸಿಮ್ ಬಳಸಿದ್ದರು. ಆ ಪೈಕಿ 5 ಮೊಬೈಲ್ ಹಾಗೂ 3 ಡೆಬಿಟ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ. ಇವರು ಬೆಂಗಳೂರು, ಗುಲ್ಬರ್ಗ ಸೇರಿ ರಾಜ್ಯದ ಹಲವು ಜಿಲ್ಲೆಗಳ ಜನರಿಗೂ ವಂಚಿಸಿರುವ ಬಗ್ಗೆ ತಿಳಿದುಬಂದಿದ್ದು, ಬೆಂಗಳೂರಿನವರಿಗೆ 12 ಲಕ್ಷ ರೂ. ವಂಚಿಸಿರುವ ಬಗ್ಗೆ ಆರೋಪಿಗಳು ಬಾಯಿಬಿಟ್ಟಿರುವುದಾಗಿ ಡಿಸಿಪಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts