ಜಿಲ್ಲೆ

ಸಾಯಿಸಲೆಂದೇ ಬಿಹಾರದಿಂದ ಚೂರಿ ತಂದಿದ್ದ; ದವಡೆ ಸೀಳಿ ಪತ್ನಿಯ ಕೊಲೆ ಮಾಡಲೆತ್ನಿಸಿದ್ದವನ ಸೆರೆ

ಬೆಂಗಳೂರು: ಕುಡಿದ ಮತ್ತಿನಲ್ಲಿ ಪತ್ನಿಯ ಮುಖಕ್ಕೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ, ದವಡೆಯನ್ನು ಸೀಳಿ, ಕೊಲೆಗೆ ಯತ್ನಿಸಿದ್ದ ಪತಿ ಮಾರತ್‌ಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ. ಬಿಹಾರ ಮೂಲದ ಭುಜ್ರತ್ ಅಲಿ (36) ಬಂಧಿತ. ಆತನ ಪತ್ನಿ ಅನ್ವರಾ ಬೇಗಂ (34) ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಹದಿನೈದು ವರ್ಷಗಳ ಹಿಂದೆ ಅನ್ವರಾ ಬೇಗಂಳನ್ನು ವಿವಾಹವಾಗಿದ್ದ ಭುಜ್ರತ್, 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಮಾರತ್‌ಹಳ್ಳಿಯ ಹರಿಯಾಣ ಗ್ರೂಪ್ ಅಪಾರ್ಟ್‌ಮೆಂಟ್ ಹಿಂಭಾಗ ನವೀನ್ ಎಂಬುವವರ ಲೇಬರ್ ಶೆಡ್‌ನಲ್ಲಿ ದಂಪತಿ ವಾಸಿಸುತ್ತಿದ್ದರು. ಪಾಮ್ ಕ್ರಿಯೇಟಿವ್ ಆಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಅನ್ವರಾ ಬೇಗಂ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಳು.

ಹತ್ತು ದಿನಗಳ ಹಿಂದೆ ಭುಜ್ರತ್ ಬೆಂಗಳೂರಿಗೆ ಬಂದಿದ್ದ. ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದುಕೊಂಡು ಮದ್ಯಪಾನ ಮಾಡಿ ಪತ್ನಿಗೆ ಕಿರುಕುಳ ಕೊಡುತ್ತಿದ್ದ. ಈ ನಡುವೆ ಪತ್ನಿಯ ಶೀಲ ಶಂಕಿಸುತ್ತಿದ್ದ ಭುಜ್ರತ್ ಆಕೆಯನ್ನು ಕೊಲೆ ಮಾಡಲೆಂದೇ ಬಿಹಾರದಿಂದ ಹರಿತವಾದ ಚೂರಿ ತಂದಿದ್ದ. ಜು.6ರಂದು ಮಧ್ಯಾಹ್ನ 2.30ರಲ್ಲಿ ಶೀಲ ಶಂಕಿಸಿ ಪತ್ನಿ ಜತೆ ಜಗಳ ಮಾಡಿ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ಚೂರಿಯಿಂದ ಆಕೆಯ ಮುಖಕ್ಕೆ ಹಲ್ಲೆ ನಡೆಸಿದ್ದ. ಪರಿಣಾಮ ಪತ್ನಿ ಅನ್ವರಾ ಬೇಗಂ ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಬಿದ್ದಿದ್ದಳು.

ಪತ್ನಿ ಕೊಲೆಯಾಗಿದ್ದಾಳೆಂದು ಭಯಬಿದ್ದು ಸ್ಥಳದಿಂದ ಪರಾರಿಯಾಗಿದ್ದ. ಅನುಮಾನ ಬಂದು ಸ್ಥಳೀಯರು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಅನ್ವರಾ ಬೇಗಂಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಾರತ್‌ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಭುಜ್ರತ್ ಫೋಟೋ ಹಿಡಿದು ಹುಡುಕಾಟ ಆರಂಭಿಸಿದ್ದರು. ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ಬಿಹಾರಕ್ಕೆ ತೆರಳಲು ಸಜ್ಜಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ 24 ಗಂಟೆಯೊಳಗೆ ಬಂಧಿಸಿದ್ದಾರೆ.