ಜಿಲ್ಲೆ

ಬಕೆಟ್ ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ; ಆಕೆಯನ್ನು ರಕ್ಷಿಸಲು ಧಾವಿಸಿದ ಪತಿ ಪ್ರಾಣಾಪಾಯದಿಂದ ಪಾರು..

ಬೆಳಗಾವಿ: ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ಹೆಂಡತಿ ಸಾವಿಗೀಡಾಗಿದ್ದು, ಆಕೆಯನ್ನು ರಕ್ಷಿಸಲು ಧುಮುಕಿದ ಪತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ.

ಹಬೀಬಾ ಇಮ್ತಿಯಾಜ್ ಮೋಮಿನ್ (28) ಮೃತಪಟ್ಟಿದ್ದು, ಪತಿ ಇಮ್ತಿಯಾಜ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಬ್ಬರು ಬಟ್ಟೆ ತೊಳೆಯಲೆಂದು ಘಟಪ್ರಭಾ ಎಡದಂಡೆ ಕಾಲುವೆ ಬಳಿಗೆ ಹೋಗಿದ್ದರು. ಬಟ್ಟೆ ಒಗೆಯುತ್ತಿದ್ದಾಗ ಕೈಜಾರಿದ ಬಕೆಟನ್ನು ಹಿಡಿಯಲು ಹೋದ ಹೆಂಡತಿ ಕಾಲು ಜಾರಿ ನೀರುಪಾಲಾಗಿದ್ದಳು.

ಹೆಂಡತಿ ನೀರಿಗೆ ಬಿದ್ದಿದ್ದನ್ನು ನೋಡಿ ಪತಿ ಕೂಡ ನೀರಿಗೆ ಧುಮುಕಿದ್ದಾನೆ. ಆದರೆ ನೀರಿನ ಹರಿವು ರಭಸದಲ್ಲಿ ಇದ್ದಿದ್ದರಿಂದ ಪತ್ನಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆಕೆಯ ಶವ ಸುಮಾರು 500 ಮೀಟರ್​ ದೂರದಲ್ಲಿ ಸಿಕ್ಕಿದೆ. ಪತ್ನಿಯನ್ನು ರಕ್ಷಿಸಲು ಹೋಗಿ ಅಪಾಯಕ್ಕೆ ಸಿಲುಕಿದ ಪತಿಯನ್ನು ಸ್ಥಳೀಯರು ಪಾರು ಮಾಡಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.