ಆನೇಕಲ್: ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿರುವುದಾಗಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಗುರುವಾರ ಆರೋಪಿಸಿದರು. ಈ ಆಪಾದನೆಗೆ ಇವು ಪುರಾವೆ ಎಂದು 5700 ಪುಟಗಳ ದಾಖಲೆಗಳನ್ನೂ ಬಿಡುಗಡೆ ಮಾಡಿದರು.
ಆನೇಕಲ್ ತಾಲೂಕಿಗೆ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಬಹಳಷ್ಟು ಮೊತ್ತವನ್ನು ಅಧಿಕಾರಿಗಳು, ಶಾಸಕರ ಹಿಂಬಾಲಕರು ಹಾಗೂ ಗುತ್ತಿಗೆದಾರರು ಜೇಬಿಗೆ ಇಳಿಸಿದ್ದಾರೆ ಎಂದು ಚಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
2014ರಿಂದ 2020ರ ಅವಧಿಯಲ್ಲಿ ಆನೇಕಲ್ ಯೋಜನಾ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ 576 ಕೋಟಿ ರೂಪಾಯಿಗೂ ಅಧಿಕ ಹಣ ಬಿಡುಗಡೆಯಾಗಿದೆ. ಇಷ್ಟು ಹಣದಲ್ಲಿ ಕಾಮಗಾರಿಗಳು ಪೂರ್ಣಗೊಂಡಿದ್ದರೆ ಆನೇಕಲ್ ಮಾದರಿ ತಾಲೂಕು ಆಗಬೇಕಿತ್ತು. ಅಧಿಕಾರಿಗಳು ನೀಡಿರುವ ಎಲ್ಲ ದಾಖಲೆ ಇಟ್ಟುಕೊಂಡು ಆಯಾ ಪ್ರದೇಶಗಳಲ್ಲಿ ಖುದ್ದಾಗಿ ಪರಿಶೀಲಿಸಿದಾಗ ಬಿಡುಗಡೆಯಾಗಿರುವ ಒಟ್ಟು ಅನುದಾನದ ಪೈಕಿ ಅಲ್ಪ ಮಾತ್ರ ಬಳಕೆಯಾಗಿದೆ. ಕಾಮಗಾರಿ ಬಗ್ಗೆ ಮಾಹಿತಿ ಹಕ್ಕಿನ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳೂ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಪಂನಲ್ಲಿ ಈ ಹಿಂದೆ ಸಿಇಒ ಆಗಿದ್ದ ಬೆಟ್ಟಸ್ವಾಮಿ, ಎನ್.ಮಂಜುಶ್ರೀ, ಎಂ.ಎಸ್. ಅರ್ಚನಾ ಮತ್ತು ಕೆ. ಶ್ರೀನಿವಾಸ್, ಆನೇಕಲ್ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿದ್ದ ಕೆ.ಎನ್. ನಾರಾಯಣಗೌಡ, ವೆಂಕಟ ದುರ್ಗಾಪ್ರಸಾದ್ ಕುಂಚಾಲ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ನಾಲ್ವರು ಇಂಜಿನಿಯರ್‌ಗಳ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೆ ಶಾಸಕ ಬಿ.ಶಿವಣ್ಣ ಹಾಗೂ ಗುತ್ತಿಗೆದಾರರ ವಿರುದ್ಧ ಶೀಘ್ರ ದೂರು ದಾಖಲಿಸಲಾಗುವುದು ಎಂದರು.
ಅಧಿಕಾರಿಗಳು ಪೂರ್ಣಗೊಳಿಸಿರುವುದಾಗಿ ಹೇಳಿರುವ ಯಾವ ಕಾಮಗಾರಿಗೂ ಗುಣಮಟ್ಟ ನಿಯಂತ್ರಣ ಇಲಾಖೆಯ ದೃಢೀಕರಣ ಪತ್ರ ಪಡೆದಿಲ್ಲ ಎಂದು ಆರೋಪ ಮಾಡಿದರು.
ಈ ಬಗ್ಗೆ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ಅಧಿಕಾರ ದುರುಪಯೋಗ, ವಂಚನೆ, ನಕಲಿ ದಾಖಲೆ ತಯಾರಿಕೆ, ಸಾರ್ವಜನಿಕ ಹಣ ದುರ್ಬಳಕೆ ಮತ್ತು ಭ್ರಷ್ಟಾಚಾರ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕಿನ 69 ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ 260 ಕೋಟಿ ರೂ. ಮೊತ್ತದ ಹಗರಣ ನಡೆಸಿದ್ದು, 67 ಕೆರೆಗಳು ಮತ್ತು ಕನಕಪುರ ತಾಲೂಕಿನ ಎರಡು ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯಲ್ಲೂ ಅಪಾರ ಭ್ರಷ್ಟಾಚಾರ ನಡೆದಿದೆ ಎಂದರು.