ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯ ಜಿದ್ದಾಜಿದ್ದಿನ ಪೈಪೋಟಿ, ಸೋಲು-ಗೆಲುವು ಸಹಜ. ಆದರೆ, ಸೋಲಿಂದ ಕಂಗೆಟ್ಟ ಕೆಲವರು ಮಾಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ.
ರಾಜಕೀಯ ದ್ವೇಷಕ್ಕೆ ದೇವದುರ್ಗ ತಾಲೂಕಿನ ಹೊನ್ನಕಾಟಮಳ್ಳಿ ಗ್ರಾಮದಲ್ಲಿ ರೈತರೊಬ್ಬರ 2 ಎಕರೆ ಜಮೀನಿನಲ್ಲಿ ಕೊಯ್ಲಿಗೆ ಬಂದಿದ್ದ ಬ್ಯಾಡಗಿ ಮೆಣಸಿನಕಾಯಿಯನ್ನು ಕಿಡಿಗೇಡಿಗಳು ನಾಶ ಮಾಡಿ ವಿಕೃತಿ ಮೆರೆದಿದ್ದರು. ಇದೀಗ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ನೆಟ್ಟೆಗೆರೆ ಗೇಟ್ನಲ್ಲಿ 250ಕ್ಕೂ ಹೆಚ್ಚು ಅಡಕೆ ಗಿಡಗಳಿಗೆ ಬೆಂಕಿ ಹಚ್ಚಿದ್ದಾರೆ! ಇದನ್ನೂ ಓದಿರಿ ಗ್ರಾಪಂ ಚುನಾವಣೆ ಸೋಲಿಂದ ಕಂಗೆಟ್ಟವ ರಾತ್ರೋರಾತ್ರಿ ರಸ್ತೆಯನ್ನೇ ಬಂದ್ ಮಾಡಿದ!
ನೆಟ್ಟೆಗೆರೆ ಗೇಟ್ ನಿವಾಸಿ ಮಾಯಣ್ಣಗೌಡ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿದ್ದರು. ಇದೇ ಕಾರಣಕ್ಕೆ ಕೆಲ ದುಷ್ಕರ್ಮಿಗಳು ಮಾಯಣ್ಣಗೌಡರ ಅಡಕೆ ತೋಟಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ.
ಅಡಕೆ ಗಿಡ, ಹನಿ ನೀರಾವರಿ ಪೈಪ್ಗಳು, ಪಂಪು ಮೋಟಾರ್ ಸುಟ್ಟಿದ್ದು, 10 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ.