ಜಿಲ್ಲೆ

ಗೋಡೆಗೆ ಕನ್ನ ಕೊರೆದು ಒಂದು ಕೆ.ಜಿ. ಚಿನ್ನ ಕದ್ದರು; ಇಬ್ಬರಿಂದ ಕಳವು..

Webdesk - Ravikanth

ಬೆಂಗಳೂರು: ಗೋಡೆಗೆ ಕನ್ನ ಕೊರೆದ ಕಳ್ಳರಿಬ್ಬರು ಸುಮಾರು ಒಂದು ಕೆ.ಜಿ. ಚಿನ್ನ ಕಳವು ಮಾಡಿರುವ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ.

ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಸರಾಯಿ ಪಾಳ್ಯದ ರಾಘವೇಂದ್ರ ರಾವ್ ಜುವೆಲರಿಯಲ್ಲಿ ಈ ಕಳ್ಳತನ ನಡೆದಿದೆ. ಸುಮಾರು 1 ಕೆ.ಜಿ. ತೂಕದ ಚಿನ್ನ ಕದ್ದುಕೊಂಡು ಹೋಗಿದ್ದಾರೆ ಎಂದು ಮಾಲೀಕ ದೂರು ನೀಡಿದ್ದಾರೆ ಪೂರ್ವ ವಿಭಾಗದ ಡಿಸಿಪಿ ಭೀಮಶಂಕರ್ ಗುಳೇದ್ ತಿಳಿಸಿದ್ದಾರೆ.

ಡ್ರಿಲ್ಲಿಂಗ್ ಮಷಿನ್​​ನಿಂದ ನಿನ್ನೆ ರಾತ್ರಿ ಗೋಡೆ ಕೊರೆದು ಈ ಕಳ್ಳತನ ಮಾಡಲಾಗಿದೆ. ಒಬ್ಬ ಒಳಗಿನಿಂದ ನುಸುಳಿದ್ದು, ಇನ್ನೊಬ್ಬ ಹೊರಗಿದ್ದು ಕಳವು ಮಾಡಿದ್ದಾರೆ. ಅಂಗಡಿಯಲ್ಲಿ ಡಿಸ್​​ಪ್ಲೇನಲ್ಲಿಟ್ಟಿದ್ದ ಚಿನ್ನಾಭರಣಗಳನ್ನ ಒಬ್ಬ ಚೀಲದಲ್ಲಿ ತುಂಬಿ ಹೊರಗಡೆ ನಿಂತಿದ್ದವನಿಗೆ ಕೊಟ್ಟಿದ್ದಾನೆ. ನಂತರ ಗೋಡೆ ಕೊರೆಯಲು ಉಪಯೋಗಿಸಿದ್ದ ವಸ್ತುಗಳನ್ನ ಅಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.