ಏನಮ್ಮ ಸೌಮ್ಯ ರೆಡ್ಡಿ.. ಬಂಗಾರ ಹಾಕಲ್ವೇನಮ್ಮ..?; ನೀನಮ್ಮ ರೂಪ.. ಚಿನ್ನ ಹಾಕಲ್ವಾ..?

siddaramaiah
Published on

ಬೆಂಗಳೂರು: ಅಹೋರಾತ್ರಿ ಧರಣಿ ನಡೆಸುವ ಹಿನ್ನೆಲೆಯಲ್ಲಿ ವಿಧಾನಸಭೆಯ ಸಭಾಂಗಣದಲ್ಲಿ ಉಳಿದಿರುವ ಕಾಂಗ್ರೆಸ್ ಶಾಸಕರು, ನಾಯಕರು ಲೋಕಾಭಿರಾಮವಾಗಿ ಹರಟುತ್ತಾ ಸಮಯ ಕಳೆದಿದ್ದಾರೆ.

ಜಯನಗರ ಶಾಸಕಿ ಸೌಮ್ಯರೆಡ್ಡಿ ಅವರನ್ನು ಕಂಡ ಸಿದ್ದರಾಮಯ್ಯ, 'ಏನಮ್ಮ ಸೌಮ್ಯ ರೆಡ್ಡಿ, ಬಂಗಾರ ಹಾಕಲ್ವೇನಮ್ಮ..?' ಎಂದು ಕಿಚಾಯಿಸಿದ್ದಾರೆ. ಅದಕ್ಕುತ್ತರಿಸಿದ ಸೌಮ್ಯ ರೆಡ್ಡಿ, 'ಇಲ್ಲ ಸರ್ ನಾನು ಹಾಕಲ್ಲ, ನನಗೆ ಬಂಗಾರ ಎಲ್ಲ ಇಷ್ಟ ಇಲ್ಲ' ಎಂದಾಗ, 'ನಿಮ್ಮಪ್ಪನೂ ಹಾಕಲ್ಲ ಅಲ್ವಾ?' ಎಂದ ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದರು.

'ಹೌದು ಸರ್..' ಎಂದ ಶಾಸಕಿ ಸೌಮ್ಯ ರೆಡ್ಡಿ ನಕ್ಕರು.

ಚರ್ಚೆ ಇಷ್ಟಕ್ಕೆ ನಿಲ್ಲಲಿಲ್ಲ. 'ರೂಪ ನೀನಮ್ಮ.. ನೀನು ಚಿನ್ನ ಹಾಕಲ್ವಾ..?' ಎಂದು ಸಿದ್ದರಾಮಯ್ಯ ಚಟಾಕಿ ಹಾರಿಸಿದರು. 'ಜಾಸ್ತಿ ಏನೂ ಹಾಕಲ್ಲ ಸರ್..' ಎಂದು ರೂಪಾ ಶಶಿಧರ್ ಉತ್ತರಿಸಿದರು. ಕೊನೆಗೆ ಅಂಜಲಿ ನಿಂಬಾಳ್ಕರ್, ಸೌಮ್ಯ ರೆಡ್ಡಿ, ರೂಪ ಶಶಿಧರ್ ಜತೆಗೆ ಒಟ್ಟುಗೂಡಿ ಹಾಸ್ಯಚಟಾಕಿ ಹಾರಿಸಿದ ಸಿದ್ದರಾಮಯ್ಯ ಸಮಯ ಕಳೆದರು.

ಇದು ನಮ್ಮ ಮೊದಲ ಅಹೋರಾತ್ರಿ ಧರಣಿ, ಖುಷಿಯಾಗುತ್ತಿದೆ ಎಂದು ಸೌಮ್ಯ ರೆಡ್ಡಿ ಹೇಳಿದರೆ, ನನ್ನದು ಐದನೆಯದು ಎಂದು ಸಿದ್ದರಾಮಯ್ಯ ಕೈಸನ್ನೆ ಮಾಡಿ ತೋರಿಸಿದರು.

ಸೌತ್ ರುಚಿ ಗಡದ್ದು ಊಟ: ಅಹೋರಾತ್ರಿ ಧರಣಿ ನಿರತ ಶಾಸಕರಿಗೆ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಮಾಂಸಹಾರ ಬಯಸಿದರಾದರೂ, ಕೇವಲ ಸಸ್ಯಾಹಾರ ಊಟ ತರಿಸಲಾಗಿತ್ತು. ಚಪಾತಿ, ಮುದ್ದೆ, ಫ್ರೂಟ್ ಸಲಾಡ್, ಅನ್ನ ಸಾರು, ಸಂಬಾರು, ತರಕಾರಿ ಸಲಾಡ್, ಪಲ್ಯ, ರೈಸ್ ಬಾತ್, ಮೊಸರು, ಡ್ರೈ ಜಾಮುನು ಸೆರಿ ಒಟ್ಟು 15 ತರಹದ ಪದಾರ್ಥಗಳಿದ್ದವು. ಬಹುತೇಕ ಶಾಸಕರು ಮೊಗಸಾಲೆಯಲ್ಲಿ ಕುಳಿತು ಖುಷಿಯಿಂದ ಊಟ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net