ಜಿಲ್ಲೆ

ಅನ್​ಲಾಕ್​ 2.0 ಇಫೆಕ್ಟ್​: ಹುಬ್ಬಳ್ಳಿಯಲ್ಲಿ ಜುಲೈ 1ರಂದೇ ಮರು ಆರಂಭ ವಿಮಾನಯಾನ

ಹುಬ್ಬಳ್ಳಿ: ಕರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್​ಡೌನ್​ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ವಾಹನಗಳಷ್ಟೇ ಅಲ್ಲದೆ ವಿಮಾನಯಾನಕ್ಕೂ ತಡೆಯೊಡ್ಡಲಾಗಿತ್ತು. ಇದೀಗ ಅನ್​​ಲಾಕ್ ಹಿನ್ನೆಲೆಯಲ್ಲಿ ವಿಮಾನಯಾನಕ್ಕೂ ಅವಕಾಶ ಸಿಗಲಿದ್ದು, ಜುಲೈ 1ರಂದೇ ವಿಮಾನಗಳ ಹಾರಾಟ ಪುನಃ ಆರಂಭವಾಗಲಿದೆ.

ಹುಬ್ಬಳ್ಳಿ ವಿಮಾನನಿಲ್ದಾಣದಿಂದ ಇಂಡಿಗೋ ಏರ್​ಲೈನ್ಸ್​ ಹಾಗೂ ಅಲಯನ್ಸ್​ ಏರ್​ ಸಂಸ್ಥೆಗಳು ವಿಮಾನ ಹಾರಾಟ ಮತ್ತೆ ಪ್ರಾರಂಭಿಸಲಿರುವ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂತೋಷ ವ್ಯಕ್ತಪಡಿಸಿ, ಶುಭವನ್ನೂ ಕೋರಿದ್ದಾರೆ. ಜತೆಗೆ ಸಾರ್ವಜನಿಕರೂ ಇದರ ಸದುಪಯೋಗ ಪಡೆಯಬೇಕು ಎಂಬುದಾಗಿಯೂ ಹೇಳಿದ್ದಾರೆ.

ಅನ್​ಲಾಕ್​ 2.0 ಪರಿಣಾಮ ವಿಮಾನಯಾನಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಜುಲೈ 1ರಂದೇ ಬಹಳಷ್ಟು ಕಡೆಗೆ ವಿಮಾನಯಾನ ಆರಂಭವಾಗಲಿದೆ. ಈ ಕುರಿತು ಕೇಂದ್ರ ಸಚಿವರು ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿ ಜನರ ಗಮನ ಸೆಳೆದಿದ್ದಾರೆ. ಜುಲೈ 1ರಂದು ಹುಬ್ಬಳ್ಳಿಯಿಂದ ಮುಂಬೈ, ಚೆನ್ನೈ, ಬೆಂಗಳೂರು, ಕಣ್ಣೂರ್, ಕೊಚ್ಚಿ, ಗೋವಾಗಳಿಗೆ, 9ರಂದು ಹೈದರಾಬಾದ್​ಗೆ ವಿಮಾನ ಹಾರಾಟ ನಡೆಸಲಿದೆ. ಆಗಸ್ಟ್ 2ರಂದು ಹುಬ್ಬಳ್ಳಿಯಿಂದ ಅಹಮದಾಬಾದ್​ಗೆ ವಿಮಾನ ಹಾರಾಟ ಮರು ಆರಂಭವಾಗಲಿದೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಇಂಡಿಗೋ ಏರ್​ಲೈನ್ಸ್​ (https://www.goindigo.in) ಅಲಯನ್ಸ್​ ಏರ್​ (https://www.airindia.in/alliance-air.htm) ಸಂಸ್ಥೆಗಳ ಅಧಿಕೃತ ಜಾಲತಾಣಗಳನ್ನು ವೀಕ್ಷಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.