Person in handcuffs 
ಜಿಲ್ಲೆ

ಉದ್ಯಮಿಗಳಿಗೆ 390 ಕೋಟಿ ರೂ. ಸಾಲ ಆಮಿಷ, 5.8 ಕೋಟಿ ರೂ. ಮೋಸ; ಐವರು ಆರೋಪಿಗಳ ಬಂಧನ

Webdesk - Ravikanth

ಬೆಂಗಳೂರು: ಉದ್ಯಮಿಗಳಿಗೆ 390 ಕೋಟಿ ರೂಪಾಯಿ ಮೊತ್ತದ ಸಾಲ ನೀಡುವ ಆಮಿಷವೊಡ್ಡಿ, 5.8 ಕೋಟಿ ರೂಪಾಯಿ ಹಣ ಪಡೆದು ಮೋಸ ಮಾಡಿದ ಐವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ರಾಜಧಾನಿಯ ಸುದ್ದಗುಂಟೆಪಾಳ್ಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಂತಾರಾಜ್ಯ ವಂಚಕರನ್ನು ವಶಕ್ಕೆ ಪಡೆದಿದ್ದಾರೆ. ಅಬ್ದುಲ್ ಜಮಾಕ್, ಸೈಯದ್ ಇಬ್ರಾಹಿಂ ಅಲಿಯಾಸ್ ಹ್ಯಾಮ್ ಸ್ಟ್ರಾಂಗ್, ವಿವೇಕ್, ಶಿವರಾಮ್ ರಘುವರನ್ ಹಾಗೂ ಕ್ರಿಸ್ಟೋಫರ್ ಬಂಧಿತ ಆರೋಪಿಗಳು.

ಉದ್ಯಮಿಗಳಿಗೆ ಲೋನ್ ಕೊಡಿಸುವುದಾಗಿ ಆಮಿಷವೊಡ್ಡಿ, ಅದಕ್ಕಾಗಿ ಹಣ ಪಡೆದು ವಂಚಿಸುತ್ತಿದ್ದ ಇವರು ಇಬ್ಬರು ಉದ್ಯಮಿಗಳಿಗೆ 390 ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ಹೇಳಿ 5.8 ಕೋಟಿ ರೂಪಾಯಿ ಪಡೆದು ತಲೆಮರೆಸಿಕೊಂಡಿದ್ದರು. ವಂಚನೆ ಆಗಿರುವ ಕುರಿತು ರಿಯಲ್​ ಎಸ್ಟೇಟ್​ ಏಜೆಂಟ್​ ಗಿರೀಶ್​ ಹಾಗೂ ಪಣಿತರನ್​ ಎಂಬವರು ದೂರು ನೀಡಿದ್ದರು.

ಹಣ ಪಡೆದ ಬಳಿಕ ಮೊಬೈಲ್​ಫೋನ್​ ಸ್ವಿಚ್ಡ್​ ಆಫ್​ ಮಾಡಿಕೊಂಡಿದ್ದ ಆರೋಪಿಗಳು, ದೂರು ದಾಖಲಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಕೇರಳ-ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಅಲ್ಲದೆ ವಂಚನೆಯ ಹಣದಲ್ಲಿ ಕೆ.ಜಿ.ಗಟ್ಟಲೆ ಚಿನ್ನವನ್ನು ಖರೀದಿಸಿದ್ದರು.

ಆರೋಪಿಗಳಿಂದ ಪೊಲೀಸರು 8.5 ಕೆ.ಜಿ. ಚಿನ್ನ, 36.5 ಲಕ್ಷ ರೂ. ನಗದು, 45 ಲಕ್ಷ ರೂ. ಬೆಲೆಬಾಳುವ ಎರಡು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಹಿನ್ನೆಲೆ ಗಾಯಕಿ ಹರಿಣಿ ಎಂಬಾಕೆಯ ತಂದೆ ಎ.ಕೆ. ರಾವ್ ಎಂಬವರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಿಚಾರಣೆಗೆ ಒಳಗಾಗಿದ್ದು, ಬಳಿಕ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.