ಜಿಲ್ಲೆ

ಕರೊನಾ ಸೋಂಕಿಗೆ ಹೆದರಿ ಇಬ್ಬರು ಮಹಿಳೆಯರು ಆತ್ಮಹತ್ಯೆ; ಒಬ್ಬರು ನೇಣು ಹಾಕಿಕೊಂಡರೆ, ಇನ್ನೊಬ್ಬರು ಗುಂಡಿಗೆ ಹಾರಿದ್ರು!

ಹುಬ್ಬಳ್ಳಿ/ಚಾಮರಾಜನಗರ: ಕರೊನಾ ಎರಡನೇ ಅಲೆ ಭಯಂಕರವಾಗಿ ಪರಿಣಮಿಸಿದ್ದು, ಹಿರಿಯರು-ಮಧ್ಯವಯಸ್ಕರು, ಬಡವರು-ಪ್ರಭಾವಿಗಳು ಎನ್ನದೆ ಎಲ್ಲರನ್ನೂ ಬಲಿ ಪಡೆಯುತ್ತಲೇ ಇದೆ. ಈ ನಡುವೆ ಸೋಂಕಿನಿಂದ ಗುಣವಾದವರು ಹಲವರಿದ್ದರೂ ಇಲ್ಲಿಬ್ಬರು ಕೋವಿಡ್-19 ಸೋಂಕು ಬಂದಿದ್ದಕ್ಕೇ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರೊನಾ ಪಾಸಿಟಿವ್ ಬಂದಿದ್ದಕ್ಕೆ ಒಬ್ಬರು ನೀರಿಗೆ ಹಾರಿದರೆ ಇನ್ನೊಬ್ಬರು ನೇಣು ಹಾಕಿಕೊಂಡಿದ್ದಾರೆ. ಹುಬ್ಬಳ್ಳಿಯ ಅದರಗುಂಚಿ ಗ್ರಾಮದ ಬಸಮ್ಮ ಸಹದೇವ ಬಳ್ಳೂರ (50) ಕಲ್ಲು‌ಕ್ವಾರಿ ಗುಂಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್​-19 ಪಾಸಿಟಿವ್ ಎಂದು ದೃಢಪಟ್ಟಿದ್ದಕ್ಕೆ ಹೆದರಿದ ಈಕೆ ಕ್ವಾರಿ ಗುಂಡಿಯಲ್ಲಿ ನಿಂತಿದ್ದ ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮೇಲಿಂದ ಮೇಲೆ ಭೀಕರ ಸುದ್ದಿಗಳು ಕೇಳಿಬರುತ್ತಿರುವ ಚಾಮರಾಜನಗರದಲ್ಲಿ ಸೋಂಕಿತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಇಕ್ಕಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ 70 ವರ್ಷದ ಸಿದ್ದಮ್ಮ ಸೋಂಕಿಗೆ ಒಳಗಾಗಿ ಮನೆಯಲ್ಲೇ ಐಸೋಲೇಟ್ ಆಗಿದ್ದರು. ಅದಾಗ್ಯೂ ಸೋಂಕಿನಿಂದ ಆತಂಕಕ್ಕೆ ಒಳಗಾದ ಅವರ ನೇಣು ಹಾಕಿಕೊಂಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್​ಡೌನ್​ ಆರ್ಥಿಕ ಸಂಕಷ್ಟಕ್ಕೆ ಹೆದರಿ ಆತ್ಮಹತ್ಯೆ

ಉಡುಪಿ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್​ಡೌನ್​ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದಾಗಿ ಆಟೋಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿಯ ಬಡಗುಬೆಟ್ಟು ಬೈಲೂರಿನ ಯತಿರಾಜ್​ (40) ಮನೆಯ ಮಾಡಿನ ಜಂತಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಉಡುಪಿ ಮೀನು ಮಾರುಕಟ್ಟೆ ಬಳಿಯ ಆಟೋ ಸ್ಟ್ಯಾಂಡಿನ ಚಾಲಕ ಆಗಿರುವ ಇವರು ಲಾಕ್​ಡೌನ್​ ತುರ್ತು ಪರಿಸ್ಥಿತಿಯಲ್ಲಿ ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.