ಜಿಲ್ಲೆ

ಹತ್ತು ವರ್ಷದ ಮಗನನ್ನು ಸಂಪ್​ಗೆ ಎಸೆದು ಕೊಂದು, ಆತ್ಮಹತ್ಯೆ ಮಾಡಿಕೊಂಡ ತಂದೆ...

ಬೆಂಗಳೂರು: ಹತ್ತು ವರ್ಷದ ಮಗನನ್ನು ಸಂಪ್​ಗೆ ಎಸೆದು ಕೊಂದ ತಂದೆ, ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಸಂಪಂಗಿರಾಮನಗರದ ನಿವಾಸಿ ಸುರೇಶ್​ ಆತ್ಮಹತ್ಯೆ ಮಾಡಿಕೊಂಡ ತಂದೆ. ಮಗನ ಹೆಸರು ಉದಯ ಸಾಯಿರಾಮ್​. ಮಗನಿಗೆ ಮಾತು ಬರದ್ದರಿಂದ ಹಾಗೂ ಕಿವಿ ಕೇಳಿಸದ್ದರಿಂದ ತಂದೆ ತೀವ್ರವಾಗಿ ನೊಂದುಕೊಂಡು ಹೀಗೆ ಮಾಡಿದ್ದಾನೆ ಎನ್ನಲಾಗಿದೆ.

ಬುದ್ಧಿಮಾಂದ್ಯ ಮಗನ ಕಾರಣಕ್ಕೆ ಗಂಡ-ಹೆಂಡತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ನಿನ್ನೆ ರಾತ್ರಿ ಕೂಡ ಸುರೇಶ್ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಇದೇ ಬೇಸರದಲ್ಲಿದ್ದ ಈತ ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಪತ್ನಿ ಜತೆಗಿದ್ದ ಮಗನನ್ನು ಎತ್ತಿಕೊಂಡು ಹೋಗಿ ಸಂಪ್​ನೊಳಕ್ಕೆ ಎಸೆದು ಹೊರಗೆ ಹೋಗಿದ್ದ.

ಸುರೇಶ್ ಕಾಣಿಸದ್ದರಿಂದ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು. ದೂರಿನ ಮೇರೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ನಂತರ ಶೇಷಾದ್ರಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೆ ಹಳಿ ಬಳಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡಿದ್ದು, ಅಲ್ಲಿನ ಪೊಲೀಸರು ಸಂಪಂಗಿರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಕುಟುಂಬಸ್ಥರಿಗೆ ಮಾಹಿತಿ ನೀಡಿದಾಗ ಅದು ಕಾಣೆಯಾಗಿದ್ದ ಸುರೇಶ್ ಎಂಬುದು ದೃಢಪಟ್ಟಿತ್ತು.