ವಿಶ್ವದಲ್ಲೇ ಇದು ಒಮಿಕ್ರಾನ್​ನಿಂದಾದ ಮೊದಲ ಸಾವು; ರೂಪಾಂತರಿ ವೈರಸ್​ ಇದೀಗ ಮತ್ತಷ್ಟು ಆತಂಕಕಾರಿ!

Omicron F
Published on

ಲಂಡನ್​: ರೂಪಾಂತರಿ ವೈರಸ್​ ಒಮಿಕ್ರಾನ್ ವ್ಯಾಪಕವಾಗಿ ಹರಡಿದರೂ ಅದರ ರೋಗಲಕ್ಷಣಗಳು ಗಂಭೀರವಲ್ಲ ಎಂಬ ಸಮಾಧಾನದ ಸಂಗತಿಗಳ ನಡುವೆಯೇ ಜಗತ್ತಿನಾದ್ಯಂತ ಒಮಿಕ್ರಾನ್​ ಸೋಂಕಿನ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ನಡುವೆ ಒಮಿಕ್ರಾನ್​ನಿಂದಾದ ಮೊದಲ ಸಾವು ಕೂಡ ದೃಢಪಟ್ಟಿದ್ದು, ರೂಪಾಂತರಿ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾದಂತಾಗಿದೆ.

ಒಮಿಕ್ರಾನ್​ನಿಂದ ಸಂಭವಿಸಿದ, ಜಗತ್ತಿನಲ್ಲೇ ಮೊದಲನೆಯದು ಎನ್ನಬಹುದಾದ ಸಾವು ಲಂಡನ್​ನಲ್ಲಿ ವರದಿಯಾಗಿದೆ. ಯುನೈಟೆಡ್ ಕಿಂಗ್​ಡಮ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರೇ ಸೋಮವಾರ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಹೊಸ ರೂಪಾಂತರಿ ಒಮಿಕ್ರಾನ್​ ವೈರಸ್​ ಒಟ್ಟಾರೆ ಕರೊನಾ ಸೋಂಕಿನ ಪ್ರಕರಣಗಳ ಪೈಕಿ ಶೇ. 50ರಷ್ಟಾಗುವ ಸಾಧ್ಯತೆ ಸಮೀಪಿಸಿದೆ. ಮಾತ್ರವಲ್ಲ, ಒಮಿಕ್ರಾನ್​ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆ ಪೈಕಿ ಒಬ್ಬರು ಒಮಿಕ್ರಾನ್​ನಿಂದ ಸಾವಿಗೀಡಾಗಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಲಂಡನ್​​ನಲ್ಲಿ ಸದ್ಯ ಒಟ್ಟಾರೆ ಕರೊನಾ ಪ್ರಕರಣಗಳ ಪೈಕಿ ಶೇ. 40ರಷ್ಟು ಒಮಿಕ್ರಾನ್ ಪ್ರಕರಣಗಳಾಗಿವೆ. ಲಂಡನ್ ಮಾತ್ರವಲ್ಲದೆ ದೇಶದ ಇತರ ಪ್ರದೇಶಗಳಲ್ಲೂ ಒಮಿಕ್ರಾನ್​ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಕಂಡುಬರಲಾರಂಭಿಸಿವೆ ಎಂದು ಅವರು ಹೇಳಿದ್ದಾರೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net