

ಬೆಂಗಳೂರು: ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಪತ್ನಿಗೆ ವಾಪಸ್ ಬರಲು ಹೇಳಿದರೂ ಮರಳದ್ದರಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಇಟ್ಟಮಡುವಿನ ಮಾರುತಿ ನಗರದಲ್ಲಿ ಈ ಘಟನೆ ಸಂಭವಿಸಿದೆ.
ನವೀನ್ ಕುಮಾರ್ (33) ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಪತಿ. ಬೆಂಗಳೂರಿನ ಇಟ್ಟಮಡುವಿನ ಮಾರುತಿ ನಗರದಲ್ಲಿ ವಾಸವಿದ್ದ ಈತ ಆರು ವರ್ಷಗಳ ಹಿಂದೆ ಚೈತ್ರಾ ಎಂಬಾಕೆಯನ್ನು ಮದುವೆಯಾಗಿದ್ದ.
ಚೆನ್ನಾಗಿಯೇ ಇದ್ದ ಇವರ ಮಧ್ಯೆ ಇತ್ತೀಚೆಗೆ ಭಿನ್ನಾಭಿಪ್ರಾಯ ಮೂಡಿದ್ದು, ಇಬ್ಬರ ನಡುವೆ ಜಗಳವಾಗಿತ್ತು. ಇದೇ ಗಲಾಟೆಯಿಂದ ಬೇಸರಗೊಂಡ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಪತ್ನಿಗೆ ಮನೆಗೆ ಮರಳುವಂತೆ ಕೋರಿದ್ದರೂ ಆಕೆ ಬರಲಿಲ್ಲ.
'ಆಗಿದ್ದಾಯ್ತು ಬಾ..' ಎಂದು ಪತ್ನಿಗೆ ಕರೆ ಮಾಡಿ ಮನೆಗೆ ವಾಪಸ್ ಬರುವಂತೆ ಕೇಳಿಕೊಂಡರೂ ಆಕೆ ಬಂದಿರಲಿಲ್ಲ. ಇದರಿಂದ ತೀವ್ರ ಮನನೊಂದಿದ್ದ ನವೀನ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.