ಬೆಂಗಳೂರು: ಇವರಿಬ್ಬರು ಸಿಕ್ಕಿ ಬಿದ್ದಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಎಲ್ಲಾದರೂ ಒಂದು ಸ್ಫೋಟ ಸಂಭವಿಸಲಿಕ್ಕೆ ಇವರು ಕಾರಣವಾಗಬಹುದಾದ ಸಾಧ್ಯತೆ ಇತ್ತು. ಸದ್ಯಕ್ಕೆ ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಇವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಪೀಣ್ಯ ಬಸ್ ನಿಲ್ದಾಣದಲ್ಲಿ ಇವರನ್ನು ತಡೆದು ಪರಿಶೀಲಿಸಿದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಪೊಲೀಸರು, ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಸುರೇಶ್(37) ಮತ್ತು ರಾಜಶೇಖರಯ್ಯ(60) ಬಂಧಿತರು. ಇವರಿಂದ ಜಿಲೇಟಿನ್, ಡಿಟೋನೇಟರ್, ಅಮೋನಿಯಂ ನೈಟ್ರೇಟ್‌ಗಳನ್ನು ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪೀಣ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತುವನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಡಿ.23ರ ಬೆಳಗ್ಗೆ 10 ಗಂಟೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಪೀಣ್ಯಕ್ಕೆ ತೆರಳಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಇವುಗಳನ್ನು ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕಾಟ ನಡೆಸುತ್ತಿದ್ದುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಅದಾಗ್ಯೂ ಈ ಸ್ಫೋಟಕ ವಸ್ತುಗಳನ್ನು ಎಲ್ಲಿಂದ ತಂದಿದ್ದರು, ಯಾರಿಗೆ ಮಾರಾಟ ಮಾಡಲು ಸಜ್ಜಾಗಿದ್ದರು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಐಎಸ್‌ಡಿ ಅಧಿಕಾರಿಗಳು ತಿಳಿಸಿದ್ದಾರೆ.