

ಗೋಪಾಲ್ಗಂಜ್: ಹುಡುಗಿಯರು ಅಪರಿಚಿತ ನಂಬರ್ನಿಂದ ಬರುವ ಕರೆಗೆ ಪ್ರತಿಕ್ರಿಯಿಸದಿರುವುದೇ ಒಳಿತು. ಅಂಥ ಒಂದು ಕಾಲ್ಗೆ ಪ್ರತಿಕ್ರಿಯಿಸಿದ್ದೇ ಈಕೆಯ ಪಾಲಿಗೆ ಒಂದು ರೀತಿಯಲ್ಲಿ ಕಾಲನ ಕರೆಯಾಗಿಬಿಟ್ಟಿತು. ಒಂದು ಕರೆಯಿಂದ ಉಂಟಾದ ಪರಿಚಯ ಈಗ ಈಕೆಯ ಮನೆಯವರೆಲ್ಲ ಪರಿತಪಿಸುವಂತೆ ಮಾಡಿದೆ.
ಬಹುಶಃ ಆತನೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದಾಗ ಅವಳಿಗೆ ಹೀಗೆಲ್ಲ ಆಗುತ್ತದೆ ಎಂಬ ಕಲ್ಪನೆಯೂ ಇದ್ದಿರಲಿಕ್ಕಿಲ್ಲ. ಹಾಗೆ ಫೋನ್ ಮೂಲಕ ಪರಿಚಿತನಾದ ಯುವಕನೊಂದಿಗೆ ಆಕೆ ಗೆಳೆತನ ಮುಂದುವರಿಸಿದ್ದಳು. ಆತ ಅದನ್ನು ಪ್ರೀತಿ ಎಂದುಕೊಂಡು, ಮದುವೆಯಾಗುವಂತೆ ಒತ್ತಾಯಿಸಿದ. ಹೀಗೆ ಫೋನ್ ಕರೆ ಮೂಲಕ ಫ್ರೆಂಡ್ ಆಗಿದ್ದ ಯುವತಿಯ ಮನೆಗೆ ತೆರಳಿದ ಆತ ಮದುವೆ ಆಗುವಂತೆ ಒತ್ತಾಯಿಸಿದ್ದ. ಆದರೆ ಮದುವೆಯಾಗಲು ಆಕೆ ನಿರಾಕರಿಸಿದ್ದರಿಂದ ಬೇಸರಗೊಂಡು ಸಿಟ್ಟಾದ ಆತ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡ ಅವಳನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಪ್ರಾಣಬಿಟ್ಟಿದ್ದಾಳೆ.
ಇಂಥದ್ದೊಂದು ಅಪರಾಧ ಪ್ರಕರಣ ಬುಧವಾರ ಸಂಭವಿಸಿದೆ. ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಸಿಧ್ವಾಲಿಯಾ ಎಂಬಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಯುವತಿಯ ಸಾವಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅನಿಲ್ ಯಾದವ್ ಹಾಗೂ ಆತನ ಗೆಳೆಯ ಧೀರಜ್ ಎಂಬಾತನನ್ನು ಗುರುವಾರ ಬಂಧಿಸಿದ್ದಾರೆ. ಜಲಲ್ಪುರ ಗ್ರಾಮದ ಅನಿಲ್ ಯಾದವ್ ಸಂತ್ರಸ್ತ ಯುವತಿಗೆ ಫೋನ್ ಮೂಲಕ ಪರಿಚಿತನಾಗಿದ್ದ. ಆಕೆ ಮದುವೆಗೆ ಒಪ್ಪದ್ದಕ್ಕೆ ಆತ ಈ ಕೃತ್ಯವೆಸಗಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)