ಜಿಲ್ಲೆ

ವಾರಾಹಿ ಕಾಲುವೆಯಲ್ಲಿ ಗಿಡಗಂಟಿ

Avinash R

ಕೋಟ: ತೆಕ್ಕಟ್ಟೆ ಗ್ರಾಮಪಂಚಾಯಿತಿಯಿಂದ ಕೋಟ, ವಡ್ಡರ್ಸೆ ಸೇರಿದಂತೆ ಸಾಲಿಗ್ರಾಮ ಪ.ಪಂ ವ್ಯಾಪ್ತಿಯವರೆಗೆ ವಾರಾಹಿ ನೀರು ಹರಿದು ಬಂದರೂ ಗ್ರಾಮಸ್ಥರಿಗೆ ಇದರ ಪ್ರಯೋಜನ ಶೂನ್ಯವೆಂಬಂತಾಗಿದೆ.

ನೀರು ಹರಿಯುವ ಕಾಲುವೆ (ತೋಡಿನಲ್ಲಿ) ಗಿಡಗಂಟಿ ದಟ್ಟವಾಗಿ ಬೆಳೆದಿದೆ ಹೂಳಿನಿಂದ ತುಂಬಿದೆ. ಸಾಕಷ್ಟು ಬಾರಿ ಇಲ್ಲಿನ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಈ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವೇ? ಜನಸಾಮಾನ್ಯರು ಪ್ರತಿವರ್ಷ ಅನುಭವಿಸುವ ಗೋಳು ಆಲಿಸುವವರಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕಿನ ಪೂರ್ವದ ಹೆಚ್ಚಿನ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತೆಕ್ಕಟ್ಟೆ ಗ್ರಾಮಪಂಚಾಯಿತಿ, ಕೋಟ ಗ್ರಾಮಪಂಚಾಯಿತಿ, ಸಾಲಿಗ್ರಾಮ ಪ.ಪಂ ಸೇರಿ ಎಲ್ಲ ಕಡೆ ನೀರಿಗಾಗಿ ಜನ ಪರದಾಡುತ್ತಿದ್ದರು. ಈ ಭಾಗದ ಕುಡಿಯುವ ನೀರಿನ ಬರ ನಿಗಿಸಿದ್ದು ವಾರಾಹಿ ನೀರು. ತೆಕ್ಕಟ್ಟೆ ಗ್ರಾಮಪಂಚಾಯಿತಿ ಮಲ್ಯಾಡಿಯಿಂದ ಬೇಳೂರು ಗ್ರಾಮದ ಮೂಲಕ ಕೋಟ ಹಾಗೂ ಸಾಲಿಗ್ರಾಮ, ವಡ್ಡರ್ಸೆ ಪಂಚಾಯಿತಿ ಮೂಲಕ ಕಾಲುವೆ ಹಾದು ಹೋಗುತ್ತದೆ. ನೀರು ಸರಾಗವಾಗಿ ಹರಿಯಲು ಗಿಡಗಂಟಿ, ಅಲಲ್ಲಿ ಬಿದ್ದ ಮರಗಳು ಅಡಚಣೆ ಉಂಟು ಮಾಡಿದೆ. ಆದರೂ ಅಲ್ಪಸ್ವಲ್ಪ ಹರಿಯುವ ನೀರಿನಿಂದ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ.

ಹೂಳೆತ್ತಲು ಆಗ್ರಹ

ಸುಮಾರು ಎಂಟು ಕಿ. ಮೀ ಉದ್ದದ ಈ ತೋಡಿನ ಹೂಳೆತ್ತದೆ ಸಾಕಷ್ಟು ವರ್ಷವಾಗಿದೆ. ಕೃಷಿಕರು, ಗ್ರಾಮಸ್ಥರು ಹೂಳೆತ್ತಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಮನವಿಯನ್ನೂ ನೀಡಲಾಗಿದೆ. ಆದರೆ ಯಾರೂ ಇದರ ಬಗ್ಗೆ ಒಂದಿಷ್ಟು ಸ್ಪಂದಿಸಿಲ್ಲ ಎನ್ನುವ ಕೊರಗು ಗ್ರಾಮಸ್ಥರದ್ದಾಗಿದೆ. ಹೂಳೆತ್ತಿ ನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸಿದರೆ ಮಳೆಗಾಲದಲ್ಲೂ ಸಮಸ್ಯೆಯಿಂದ ಮುಕ್ತಿ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರು ಸಹ ಸರಾಗವಾಗಿ ಹರಿಯುತ್ತದೆ. ಕೃಷಿ ಕಾಯಕ ಮರಳಿ ಶುರುವಾಗಬಹುದು.

ಸಾಕಷ್ಟು ಉದ್ದವಿರುವ ಈ ತೋಡಿನಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಗೂ ಕೃಷಿ ಕಾಯಕಕ್ಕೆ ಅನುಕೂಲವಾಗಿದೆ. ಆದರೆ ಹೂಳು,ಗಿಡಗಂಟಿ ತುಂಬಿಕೊಂಡಿದ್ದು ಮಳೆಗಾಲದಲ್ಲಿ ನೆರೆ,ಬೇಸಿಗೆಯಲ್ಲಿ ವಾರಾಹಿ ನೀರು ಸರಾಗವಾಗಿ ಹರಿಯದೆ ಗ್ರಾಮಸ್ಥರಿಗೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಎಷ್ಟು ಬಾರಿ ಮನವಿ ನೀಡಿ, ಪ್ರತಿಭಟನೆ ಮಡಿದರೂ ಜನಪ್ರತಿನಿಧಿಗಳು ಲೆಕಕ್ಕೆ ತೆಗೆದುಕೊಳ್ಳುವುದಿಲ್ಲ.ಇನ್ನಾದರೂ ಹೂಳೆತ್ತಿ ಜನಸಾಮಾನ್ಯರಿಗೆ, ಕೃಷಿಕರಿಗೆ ಅನುಕೂಲಕ ಮಾಡಿಕೊಡಬೇಕು. -ತಿಮ್ಮ ಕಾಂಚನ್, ಹರ್ತಟ್ಟು ಗಿಳಿಯಾರು