More

    ಮಂಗಳೂರು ವಿಶ್ವವಿದ್ಯಾಲಯ ಖಜಾನೆ ಖಾಲಿ

    -ಶ್ರವಣ್‌ಕುಮಾರ್ ನಾಳ, ಮಂಗಳೂರು

    ರಾಜ್ಯದ ಪ್ರಮುಖ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರವಾಗಿರುವ ಮಂಗಳೂರು ವಿಶ್ವವಿದ್ಯಾಲಯ ಅಕ್ಷರಶಃ ದಿವಾಳಿಯತ್ತ ಸಾಗಿದೆ. ಕಳೆದ ಡಿಸೆಂಬರ್ ಹಾಗೂ ಜನವರಿಯಲ್ಲಿನ ಮೌಲ್ಯಮಾಪನ ವೆಚ್ಚ, ಕರೊನಾ ಸಂದರ್ಭದ ಅತಿಥಿ ಉಪನ್ಯಾಸಕರ ಗೌರವ ಧನ ಪಾವತಿಗೂ ಈಗ ವಿವಿಯಲ್ಲಿ ದುಡ್ಡಿಲ್ಲ!

    ಡಿಸೆಂಬರ್ ಹಾಗೂ ಜನವರಿಯಲ್ಲಿ 586 ಮೌಲ್ಯಮಾಪಕರಿಂದ ವಿಶ್ವವಿದ್ಯಾಲಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದೆ. ಈ ಮೌಲ್ಯಮಾಪಕರಿಗೆ ಪ್ರತಿ 1 ಪತ್ರಿಕೆ ಮೌಲ್ಯಮಾಪನಕ್ಕೆ 22 ರೂ. ಹಾಗೂ ಪ್ರತಿದಿನ ಟಿ.ಎ. 950 ರೂ. ನೀಡಬೇಕು. ಸತತ 30-35 ದಿನಗಳ ಕಾಲ ಪ್ರತಿಯೊಬ್ಬರು ಒಟ್ಟು 600-700 ಪತ್ರಿಕೆ ಮೌಲ್ಯಮಾಪನ ನಡೆಸಲು ವಿವಿ ನಿರ್ದೇಶನ ನೀಡಿತ್ತು. ಅದರಂತೆ 586 ಮೌಲ್ಯಮಾಪಕರಿಗೆ 1.5 ಕೋಟಿ ರೂ. ಮೌಲ್ಯಮಾಪನ ವೆಚ್ಚವನ್ನು ಪಾವತಿಸಬೇಕಿತ್ತು.

    ವೇತನ ಪಾವತಿ ಬಾಕಿ

    ಕೋವಿಡ್ ಸಂದರ್ಭ ತರಗತಿ ನಡೆಸಿದ್ದ 400ಕ್ಕೂ ಅಧಿಕ ಅತಿಥಿ ಉಪನ್ಯಾಸಕರಿಗೆ ವೇತನ ನೀಡುವ ಬಗ್ಗೆ ಎರಡು ವರ್ಷದ ಹಿಂದೆ ವಿವಿಯ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಈವರೆಗೆ ಕೇವಲ 1 ತಿಂಗಳ ವೇತನ ಮಾತ್ರ ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದ 3 ತಿಂಗಳ ಮೊತ್ತ ಸುಮಾರು 3 ಕೋಟಿ ರೂಪಾಯಿ 2 ವರ್ಷವಾದರೂ ಪಾವತಿಯಾಗಿಲ್ಲ. ಅತಿಥಿ ಉಪನ್ಯಾಸಕರಿಗೆ ಭರ್ಜರಿಯಾಗಿ ಗೌರವಧನ ಏರಿಕೆ ಮಾಡಿದ್ದರೂ ವಿವಿ ಅವರ 2 ತಿಂಗಳ ವೇತನ ಪಾವತಿ ಬಾಕಿಯಿರಿಸಿದೆ.

    ವಿವಿ ತನ್ನ ಆದಾಯಕ್ಕಿಂತ ಜಾಸ್ತಿ ದುಂದು ವೆಚ್ಚ ಮಾಡಿದ ಪರಿಣಾಮ ವಿವಿ ಖಜಾನೆ ಬರಿದಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕ್ಯಾಂಪಸ್‌ನಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದರೂ ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ರೂ. ಹಣ ನಿರ್ಮಾಣ ಸಂಸ್ಥೆಗೆ ಪಾವತಿಸಿದೆ. ಕೋಟ್ಯಂತರ ರೂಪಾಯಿ ಪಾವತಿಸಿ ಬೇಕಾಬಿಟ್ಟಿ ಖರೀದಿಯಿಂದಲೂ ವಿವಿ ಖಜಾನೆ ಖಾಲಿಯಾಗಿದೆ.

    ಅಗತ್ಯಕ್ಕಿಂತ ಜಾಸ್ತಿ ಸಿಬ್ಬಂದಿ ನೇಮಕ

    ಮಂಗಳೂರು ವಿವಿಯಲ್ಲಿ ಒಟ್ಟು 548 ಬೋಧಕೇತರ ಹುದ್ದೆಗಳಲ್ಲಿ 349 ಹುದ್ದೆ ಭರ್ತಿಯಾಗದೆ ಖಾಲಿ ಉಳಿದಿದೆ. ಪ್ರಸ್ತುತ ಅವಧಿಯಲ್ಲಿ ಈ ಭರ್ತಿಯಾಗದ 349 ಹುದ್ದೆಗಳ ಬದಲಾಗಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿರುವುದು ವಿವಿ ಆರ್ಥಿಕತೆಗೆ ಬಹುದೊಡ್ಡ ಹೊಡೆತ ನೀಡಿದೆ. ಲಭ್ಯ ಮಾಹಿತಿ ಪ್ರಕಾರ ವಿವಿಯಲ್ಲಿ ಖಾಲಿಯಿರುವ ಹುದ್ದೆ 349. ಇದು ನೇರವಾಗಿ ಭರ್ತಿ ಮಾಡಬೇಕಾದ ಹುದ್ದೆಗಳು. ಇದರ ಬದಲಾಗಿ 425 ತಾತ್ಕಾಲಿಕ ಸಿಬ್ಬಂದಿ ಹಾಗೂ 350 ಹೊರಗುತ್ತಿಗೆ ಸಿಬ್ಬಂದಿಯನ್ನು ವಿವಿ ನಿಯೋಜಿಸಿದೆ. ಒಟ್ಟು 974 ಬೋಧಕೇಕರ ಸಿಬ್ಬಂದಿ ವಿವಿಯ ಕ್ಯಾಂಪಸ್, ಚಿಕ್ಕಳುವಾರು ಕ್ಯಾಂಪಸ್, ಘಟಕ ಕಾಲೇಜು, ಸಂಶೋಧನಾ ಕೇಂದ್ರಗಳಲ್ಲಿದ್ದಾರೆ. ಇದೇ ವಿವಿಗೆ ಆರ್ಥಿಕವಾಗಿ ದೊಡ್ಡ ಹೊರೆಯಾಗಿದೆ.

    ಅತಿಥಿ ಉಪನ್ಯಾಸಕರ ಆಕ್ರೋಶ

    ಅತಿಥಿ ಉಪನ್ಯಾಸಕರಿಗೆ ಕೋವಿಡ್ ಸಂದರ್ಭದ ಬಾಕಿ ಉಳಿದಿರುವ ವೇತನ ಪಾವತಿಸುವ ಅಂತಿಮ ದಿನಾಂಕವನ್ನು ಹಲವು ಬಾರಿ ವಿವಿ ನೀಡಿದ್ದರೂ ಪಾವತಿ ಮಾಡಿಲ್ಲ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಏ.30ರ ಒಳಗೆ ಪೂರ್ತಿಯಾಗಿ ವೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದರೂ ನೀಡಿಲ್ಲ. ತಿಂಗಳ 10ನೇ ತಾರೀಕಿನ ಒಳಗಾಗಿ ಅತಿಥಿ ಉಪನ್ಯಾಸಕರ ವೇತನ ನೀಡಬೇಕು ಎಂಬ ಸಿಂಡಿಕೇಟ್ ನಿರ್ಣಯಕ್ಕೂ ಬೆಲೆ ಇಲ್ಲ. ಪ್ರಸ್ತುತ ವಿವಿಯಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರು ತಿಂಗಳ ಸಂಬಳಕ್ಕಾಗಿ 2-3 ತಿಂಗಳು ಕಾಯುವ ಸ್ಥಿತಿ ಇದೆ. ಜೂನ್ 2ರಂದು ಕುಲಪತಿ ಪ್ರೊ. ಯಡಪಡಿತ್ತಾಯ ಅವಧಿ ಮುಕ್ತಾಯವಾಗಲಿದ್ದು, ಸಂಬಳ ಪಾವತಿ ಮಾಡದಿರುವುದಕ್ಕೆ ಅತಿಥಿ ಉಪನ್ಯಾಸಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಅಂಬೇಡ್ಕರ್ ಪ್ರತಿಮೆ ಹೆಸರಲ್ಲಿ ದುಂದುವೆಚ್ಚ

    ವಿಶ್ವವಿದ್ಯಾಲಯವು ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯ ವೆಚ್ಚದಷ್ಟೇ ಹೆಚ್ಚು ಕಡಿಮೆ ಅದರ ಉದ್ಘಾಟನೆಗೆ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಕಂಚಿನ ಪ್ರತಿಮೆಗೆ ವೆಚ್ಚ ಆಗಿರುವುದು 14.30 ಲಕ್ಷ ರೂಪಾಯಿ. ಆದರೆ, ಇತರ ಖರ್ಚುಗಳು 10.64 ಲಕ್ಷ ರೂ.ಗಳು ಎಂದು ವಿವಿ ತಿಳಿಸಿದೆ. ಪ್ರತಿಮೆ ಪರಿಶೀಲನೆಗಾಗಿ ಆಂಧ್ರಪ್ರದೇಶಕ್ಕೆ ಭೇಟಿ 50 ಸಾವಿರ ರೂ, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಂಗಡ ಪಾವತಿ 5 ಲಕ್ಷ ರೂ, ಅತಿಥಿಗೃಹ ವೆಚ್ಚ 14,494 ರೂ, ಅತಿಥಿಗಳ ವಿಮಾನ ಯಾನ ವೆಚ್ಚ, ಆಮಂತ್ರಣ ಮತ್ತಿತರ ಖರ್ಚು 2 ಲಕ್ಷ ರೂ, ಅತಿಥಿಗಳ ವಾಸ್ತವ್ಯ, ವೇದಿಕೆ ಇತರ ಖರ್ಚು 1 ಲಕ್ಷ ರೂ, ಪ್ರತಿಮೆ ಅನಾವರಣ ಹಿನ್ನೆಲೆ ವಿಜ್ಞಾನ ಸಂಕೀರ್ಣ ಕಟ್ಟಡದ ಮುಂಭಾಗ ಕಾರಂಜಿ ಸ್ವಚ್ಛತೆ, ಬಣ್ಣ ಬಳಿಯಲು, ಕುರುಚಲು ಗಿಡ ತೆರವುಗೊಳಿಸಲು 1 ಲಕ್ಷ ರೂ, ಕಾರ್ಯಕ್ರಮಕ್ಕೆ ಹೂವಿನ ಅಲಂಕಾರ, ಉದ್ಘಾಟನಾ ಫಲಕ, ಕಾರ್ಪೆಟ್, ಇತರ ಖರ್ಚು 1 ಲಕ್ಷ ರೂ. ವೆಚ್ಚವಾಗಿದೆ ಎಂದು ದಾಖಲೆಗಳು ಹೇಳಿವೆ.

    ಸದ್ಯಕ್ಕೆ ವಿವಿಯಲ್ಲಿ ಆರ್ಥಿಕ ಕೊರತೆ ಇದೆ, ಆದರೆ ಯಾರಿಗೂ ವೇತನ ಕೊಡದೆ ಬಾಕಿ ಮಾಡುವುದಿಲ್ಲ. ಜೂನ್ 2ರಂದು ನನ್ನ ಅಧಿಕಾರಾವಧಿ ಮುಗಿಯುವುದರಿಂದ ಮೇ 25ರ ಸಿಂಡಿಕೇಟ್ ಸಭೆಯಲ್ಲಿ ವೇತನ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ.

    -ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts