More

    ಸೌಜನ್ಯಕ್ಕಾದ್ರೂ ಭರವಸೆ ನೀಡೋದು ಬೇಡ್ವೇ: ಕೆಇಎಗೆ ಪಾಲಕರ ತಕರಾರು ಏನು ಗೊತ್ತಾ?

    ಬೆಂಗಳೂರು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಸಿಇಟಿ ಪರೀಕ್ಷೆಯಲ್ಲಿ ದೊಡ್ಡಮಟ್ಟದ ಎಡವಟ್ಟಾಗಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕನಿಷ್ಠ ಸೌಜನ್ಯಕ್ಕಾದರೂ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಧೈರ್ಯ ತುಂಬುವ ಮನಸ್ಸು ಮಾಡಿಲ್ಲವೆಂಬ ಆಕ್ರೋಶ ವ್ಯಕ್ತವಾಗುತ್ತಿದೆ.

    ಏ.18 ಮತ್ತು 19ರಂದು ನಡೆದ ಸಿಇಟಿಯಲ್ಲಿ ಮೂರೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬಳಿಕ ಎಂದಿನಂತೆ ಆಕ್ಷೇಪಣೆಗಳನ್ನು ಆಹ್ವಾನಿಸುವುದನ್ನು ಹೊರತುಪಡಿಸಿ ಪಾಲಕರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲವೆಂಬ ಅಸಮಾಧಾನ ವ್ಯಕ್ತವಾಗುತ್ತಿದೆ.

    ಪಾಲಕರ ಆಗ್ರಹವೇನು?

    ತಪ್ಪು ಎಲ್ಲಾಗಿದೆ, ಯಾರಿಂದ ನಡೆದಿದೆ ಎಂಬುದನ್ನು ನಿಧಾನವಾಗಿ ಪತ್ತೆ ಹಚ್ಚುವ ಕೆಲಸವಾಗಲಿದೆ. ಆದರೆ, ತಕ್ಷಣಕ್ಕೆ ಅಧಿಕಾರಿಗಳು ಮಾಧ್ಯಮಗಳ ಮೂಲಕ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡುವ ಕೆಲಸ ಮಾಡಬೇಕಿತ್ತು.

    ವಿದ್ಯಾರ್ಥಿಗಳು ಮತ್ತು ಪಾಲಕರು ಯಾವುದೇ ಆತಂಕಕ್ಕೆ ಒಳಗಾಗಬೇಡಿ. ಈ ಘಟನೆಯಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಪ್ರಾಧಿಕಾರವು ಬಿಡುವುದಿಲ್ಲ. ತಮ್ಮೊಂದಿಗೆ ನಾವಿದ್ದೇವೆ. ಔಟ್ ಆ್ ಸಿಲಬಸ್ ಬಗ್ಗೆ ಆತಂಕಕ್ಕೆ ಒಳಗಾಗಬೇಡಿ. ಎಲ್ಲಿ ಸಮಸ್ಯೆಯಾಗಿದೆ ಎಂದು ಸಮಿತಿ ರಚಿಸಿ ಪಾರದರ್ಶಕವಾಗಿ ತಿಳಿಯುತ್ತೇವೆ ಎಂಬ ವಿಷಯವನ್ನು ಪಾಲಕರಿಗೆ ತಿಳಿಸುವ ಕೆಲಸ ಮಾಡಿದ್ದರೆ, ವಿದ್ಯಾರ್ಥಿಗಳಿಗೆ ಅರ್ಧ ಧೈರ್ಯ ಬರುತ್ತಿತ್ತು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

    ವಿದ್ಯಾರ್ಥಿಗಳು ಸಿಇಟಿ ಬಗ್ಗೆ ಹೆಚ್ಚು ಯೋಚನೆ ಮಾಡದೆ, ನೀಟ್ ಪರೀಕ್ಷೆ ಇದೆ. ಅದರ ಬಗ್ಗೆ ಹೆಚ್ಚು ಗಮನ ಹರಿಸಿ ನಿಮ್ಮೊಂದಿಗೆ ನಾವಿದ್ದೇವೆಂದು ಭಾವನಾತ್ಮಕವಾಗಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕಿತ್ತು ಎಂದು ಪಾಲಕರು ನಿರೀಕ್ಷಿಸುತ್ತಿದ್ದಾರೆ.

    ಕೆಇಎ ಈ ಕೆಲಸವನ್ನು ಮಾಡದಿರುವುದರಿಂದ ಪರೀಕ್ಷಾ ಪ್ರಾಧಿಕಾರದಿಂದಲೇ ತಪ್ಪಾಗಿದೆಯೇ ಎಂಬ ಅನುಮಾನ ಪಾಲಕರಲ್ಲಿ ಮೂಡಿದೆ. ಅದಕ್ಕಿಂತ ಹೆಚ್ಚಾಗಿ ತಮ್ಮ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಲಿದೆಯೇ ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಮೂಡಿದೆ. ಈ ಭಯವನ್ನು ತಕ್ಷಣಕ್ಕೆ ಹೋಗಲಾಡಿಸುವ ಕೆಲಸ ಮಾಡದಿರುವುದು ಮತ್ತು ಮೌನಕ್ಕೆ ಶರಣಾಗಿರುವುದು ಪರೀಕ್ಷೆಯನ್ನು ಅನುಮಾನದ ದೃಷ್ಟಿಯಿಂದಲೇ ನೋಡುವಂತಾಗಿದೆ.

    ಇದರ ಜತೆಗೆ ಪ್ರಾಧಿಕಾರದ ಹಿಂದಿನ ಘಟನಾವಳಿಗಳನ್ನು ನೆನೆದು ಸಿಇಟಿಯನ್ನು ಹತ್ತಾರು ದೃಷ್ಟಿಕೋನದಲ್ಲಿ ನೊಡುವಂತಾಗಿದೆ. ಪ್ರತಿ ದಿನ ಏನಾಗುವುದೋ ಎಂದು ಯೋಚನೆ ಮಾಡುವಂತಾಗಿದೆ ಎಂದು ಪಾಲಕರು ತಮ್ಮ ತೊಳಲಾಟ ತೋಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts