

ನವದೆಹಲಿ: ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಲೇಬೇಕು. ಇಲ್ಲದಿದ್ದರೆ, ನೀವು ಟ್ರಾಫಿಕ್ ಪೊಲೀಸರಿಂದ ಕ್ರಮವನ್ನು ಎದುರಿಸಬೇಕಾಗುತ್ತದೆ. ಆದರೆ, ಕೆಲವೊಮ್ಮೆ ನಿಯಮ ಉಲ್ಲಂಘನೆಯಂತಹ ಪ್ರಕರಣಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳುವ ವಾಹನ ಸವಾರರು ಸ್ಥಳದಲ್ಲಿಯೇ ಹೈಡ್ರಾಮ ಸೃಷ್ಟಿಸಿಬಿಡುತ್ತಾರೆ. ಅಂಥದ್ದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.
ಕೆಲವರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಲ್ಲದೆ ಪ್ರಶ್ನೆ ಮಾಡುವ ಪೊಲೀಸರ ವಿರುದ್ಧವೇ ತಿರುಗಿ ಬೀಳುತ್ತಾರೆ. ಇನ್ನೂ ಕೆಲವರು ಟ್ರಾಫಿಕ್ ಪೊಲೀಸರಿಗೆ ಲಂಚ ನೀಡುವ ಮೂಲಕ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಇತ್ತೀಚೆಗಷ್ಟೇ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಹುಡುಗನೊಬ್ಬ ಸ್ಥಳದಲ್ಲೇ ಮಾಡಿದ ಹೈಡ್ರಾಮ ಎಂಥವರ ಮುಖದಲ್ಲೂ ನಗು ತರಿಸುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಹುಡುಗನೊಬ್ಬ ತನ್ನ ತಂದೆಯ ಸ್ಕೂಟರ್‌ನಲ್ಲಿ ಮೋಜು ಮಸ್ತಿ ಮಾಡುತ್ತಾ ಬಂದು ಸಂಚಾರಿ ಪೊಲೀಸ್ ಅಧಿಕಾರಿಗೆ ಕೈಗೆ ಸಿಕ್ಕಿಬೀಳುತ್ತಾನೆ. ಈ ಸಂದರ್ಭದಲ್ಲಿ ಆ ಹುಡುಗನು ಮಾಡುವ ನಾಟಕ ನೋಡಿ ಪೊಲೀಸ್ ಅಧಿಕಾರಿಯು ಸಹ ನಗೆಗಡಲಲ್ಲಿ ತೇಲುತ್ತಾರೆ. ಅಂದಹಾಗೆ ಹುಡುಗ ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡಿಂಗ್ ಮಾಡಿ ಸಿಕ್ಕಿಬಿದ್ದಿರುವುದಾಗಿ ತಿಳಿದುಬಂದಿದೆ. ಪೊಲೀಸರನ್ನು ಕಂಡು ಹೆದರಿದ ಹುಡುಗ ಜೋರಾಗಿ ಅಳಲು ಆರಂಭಿಸಿದ್ದಾನೆ. ಅಲ್ಲದೆ, ನನ್ನನ್ನು ಹೋಗಲು ಬಿಡಿ ಆಂಟಿ ಪ್ಲೀಸ್... ಎಂದು ಗೋಗರೆದಿದ್ದಾನೆ.
ಇದೇ ಸಂದರ್ಭದಲ್ಲಿ ಬಾಲಕನ ಇನ್ನಿಬ್ಬರು ಸ್ನೇಹಿತರು ಆತನ ಹತ್ತಿರದಲ್ಲಿ ಸದ್ದಿಲ್ಲದೆ ನಿಂತಿದ್ದರು, ಆದರೆ ಸ್ಕೂಟರ್ ಓಡಿಸುತ್ತಿದ್ದ ಹುಡುಗ ಮಾತ್ರ ಪೋಲೀಸರ ಕಾಲಿಗೆ ಬಿದ್ದು ಸ್ಕೂಟರ್ ಬೀಗವನ್ನು ವಾಪಸ್ ಕೊಡುವಂತೆ ಪರಿಪರಿಯಾಗಿ ಬೇಡಿಕೊಂಡನು. ಸಾಲದು ಎಂಬಂತೆ ಕಣ್ಣೀರಾಕಿದನು. ಬಾಲಕನ ಈ ನಾಟಕವನ್ನು ನೋಡಿದ ಸಂಚಾರಿ ಪೊಲೀಸ್ ವಿಭಾಗದ ಮಹಿಳಾ ಅಧಿಕಾರಿ ಮಾತ್ರ ನಕ್ಕರು. ಸದ್ಯ ಇದಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)