ಡಾ.ಸುಶೀಲಾ, ಡಾ.ಪ್ರೇಮಲತಾ. 
ಜಿಲ್ಲೆ

ಡಾ.ಎಚ್.ಗಿರಿಜಮ್ಮ ಪ್ರಶಸ್ತಿಗೆ ಡಾ.ಕೆ.ಸುಶೀಲಾ, ಡಾ.ಬಿ.ಪ್ರೇಮಲತಾ ಅವರ ಕೃತಿಗಳು ಆಯ್ಕೆ

ಬೆಂಗಳೂರು: 2022ನೇ ಸಾಲಿನ ಡಾ.ಎಚ್. ಗಿರಿಜಮ್ಮ ಪ್ರಶಸ್ತಿಗೆ ಡಾ.ಕೆ.ಸುಶೀಲಾ ಅವರ 'ವೈದ್ಯೆಯೊಬ್ಬರ ನೆನಪಿನಂಗಳದಿಂದ' ಹಾಗೂ ಡಾ.ಬಿ.ಪ್ರೇಮಲತಾ ಅವರ 'ಐದು ಬೆರಳುಗಳು' ಕಥಾಸಂಕಲನ ಆಯ್ಕೆಯಾಗಿವೆ.

ಡಾ.ಗಿರಿಜಮ್ಮ ಪ್ರಶಸ್ತಿಗೆ 2022ರಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯ ಮತ್ತು ವೈದ್ಯೇತರ ಸಾಹಿತ್ಯ ವಿಭಾಗದಿಂದ ಕೃತಿಗಳನ್ನು ವೈದ್ಯಲೇಖಕಿಯರಿಂದ ಆಹ್ವಾನಿಸಲಾಗಿತ್ತು. ಈ ಪ್ರಯುಕ್ತ ರಾಜ್ಯಾದ್ಯಂತ ಸಾಕಷ್ಟು ಕೃತಿಗಳು ಬಂದಿದ್ದು ಅಂತಿಮವಾಗಿ ವೈದ್ಯ ಸಾಹಿತ್ಯದಿಂದ ಡಾ.ಕೆ.ಸುಶೀಲಾ ಅವರ 'ವೈದ್ಯೆಯೊಬ್ಬರ ನೆನಪಿನಂಗಳದಿಂದ' ಹಾಗೂ ವೈದ್ಯೇತರ ಸಾಹಿತ್ಯ ವಿಭಾಗದಿಂದ ಡಾ. ಬಿ.ಪ್ರೇಮಲತಾ ಅವರ 'ಐದು ಬೆರಳುಗಳು' ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಮತ್ತು ಸ್ಮರಣಫಲಕ ಒಳಗೊಂಡಿರುತ್ತದೆ.

ಆಯ್ಕೆ ಸಮಿತಿಯಲ್ಲಿದ್ದ ಹಿರಿಯ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್, ವೈದ್ಯರಾದ ಡಾ.ಆರ್.ಕೆ.ಸರೋಜ, ಡಾ.ನಾ. ಸೋಮೇಶ್ವರ ಹಾಗೂ ಹಿರಿಯ ಕವಯಿತ್ರಿ ಡಾ.ಎಚ್.ಎಲ್.ಪುಷ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭ ಡಿ.9ರ ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.