ಹಾವೇರಿ: ಲಾಕ್ಡೌನ್ ಸಮಯದಲ್ಲಿ ಬಸ್ ನಿಲ್ದಾಣವೊಂದರಲ್ಲಿ ರೈತರೊಬ್ಬರು ಮಾಡಿರುವ ಕೆಲಸ ಇದೀಗ ಎಲ್ಲೆಡೆ ಗಮನ ಸೆಳೆಯಲಾರಂಭಿಸಿದೆ. ಮಾತ್ರವಲ್ಲ ಇದು ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಇದನ್ನು ಕೆಲವರು ತಪ್ಪು ಎಂದು ಹೇಳಿದರೆ, ಇದರಲ್ಲೇನು ತಪ್ಪು ಎಂಬುದು ಈ ರೈತರ ಪ್ರಶ್ನೆ!
ಬಿಕೋ ಎನ್ನುತ್ತಿರುವ ರಸ್ತೆಯಲ್ಲಿರುವ ಈ ಬಸ್ ನಿಲ್ದಾಣ ರೈತರೊಬ್ಬರಿಂದಾಗಿ ಗಮನ ಸೆಳೆಯುವಂತಾಗಿದೆ. ಅಂದಹಾಗೆ ಈ ಬಸ್ ನಿಲ್ದಾಣ ಇರುವುದು ಹಾವೇರಿ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ. ಕಳೆದ ಕೆಲವು ದಿನಗಳ ಹಿಂದೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಬರದೆ ತಂಗುದಾಣ ಖಾಲಿ ಉಳಿದಿದ್ದು ಒಂದೆಡೆಯಾದರೆ, ಈಗ ಕೆಲವು ದಿನಗಳಿಂದ ಕರ್ಫ್ಯೂ-ಲಾಕ್ಡೌನ್ ಕಾರಣದಿಂದಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದು, ಬಸ್ ನಿಲ್ದಾಣಗಳು ಕೂಡ ಭಣಗುಡುತ್ತಿವೆ. ಮಣ್ಣೂರು ಗ್ರಾಮದ ಈ ಬಸ್ ನಿಲ್ದಾಣವೂ ಅದಕ್ಕೆ ಹೊರತಾಗಿಲ್ಲ.
ಇದನ್ನೂ ಓದಿ: ಸೋಂಕಿತ ಹಿಂದು ವೃದ್ಧೆಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು; ಕೊನೆಗೆ ಮುಸ್ಲಿಂ ಯುವಕರಿಂದ ಅಂತಿಮಸಂಸ್ಕಾರ
ಲಾಕ್ಡೌನ್ ಹಿನ್ನೆಲೆಯಲ್ಲಿ ರಸ್ತೆ ಬಿಕೋ ಎನ್ನುತ್ತಿದ್ದು, ಬಸ್ ನಿಲ್ದಾಣವೂ ಖಾಲಿ ಇದೆ. ಹೀಗಾಗಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಒಂದು ಲೋಡ್ನಷ್ಟು ಶೇಂಗಾ ಹೊಟ್ಟನ್ನು ರೈತರೊಬ್ಬರು ಇಲ್ಲಿ ಶೇಖರಿಸಿ ಇಟ್ಟಿದ್ದಾರೆ. ಇದು ಬಸ್ ನಿಲ್ದಾಣದ ಸದ್ಬಳಕೆಯೋ-ದುರ್ಬಳಕೆಯೋ ಎಂಬ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಹಲವರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಸ್ ಬರದಿದ್ದರೂ, ಪ್ರಯಾಣಿಕರು ಇರದಿದ್ದರೂ ಈ ಬಸ್ ನಿಲ್ದಾಣ ಗಮನ ಸೆಳೆಯುತ್ತಿದೆ.