ಜಿಲ್ಲೆ

ಜ್ವರ ಎಂದು ಆಸ್ಪತ್ರೆಗೆ ಹೋಗಿ ಬಂದವ ನಾಲೆಗೆ ಹಾರಿ ಪ್ರಾಣಬಿಟ್ಟ!

arunakunigal

ಪಾಂಡವಪುರ: ಕರೊನಾ ರೋಗದ ವಿರುದ್ಧ ಧೈರ್ಯವಾಗಿ ಹೋರಾಡಿ ಎಂದು ವೈದ್ಯಲೋಕ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ದುಡುಕಿನ ನಿರ್ಧಾರಕ್ಕೆ ಬರುತ್ತಿರುವುದು ದುರಂತ. ಕಳೆದ ತಿಂಗಳು ಕರೊನಾ ಸೋಂಕು ಇರುವುದು ತಿಳಿಯುತ್ತಿದ್ದಂತೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣಕ್ಕೆ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಪರೀಕ್ಷೆಯ ವರದಿ ಬರುವ ಮುನ್ನವೇ ವೃದ್ಧನ ಬುದುಕು ದುರಂತ ಅಂತ್ಯಕಂಡಿದೆ.

ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದ ಹಾರೋಹಳ್ಳಿ ಗ್ರಾಮದ ನಿವಾಸಿ ಚಿಕ್ಕಣ್ಣ (60) ಸೋಂಕು ದೃಢವಾಗಬಹುದು ಎಂದು ಹೆದರಿ ಸೋಮವಾರ ಸಮೀಪದ ವಿಶ್ವೇಶ್ವರಯ್ಯ ನಾಲೆಗೆ ಹಾರಿದ್ದಾರೆ.

ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಪರಿಣಾಮ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕ್ಕಣ್ಣ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಕರೊನಾ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿ ಜತೆಗೆ ಗಂಟಲು ದ್ರವ ಪಡೆದಿದ್ದರು. ಪರೀಕ್ಷಾ ವರದಿ ಬರುವವರೆಗೂ ಕಾಯುವಂತೆ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.

ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದ ವೃದ್ಧ, ವರದಿ ಬರುವ ಮುನ್ನವೇ ತನಗೆ ಕರೊನಾ ಪಾಸಿಟಿವ್​ ಆಗಿರಬಹುದು ಎಂದು ಭಯಗೊಂಡು ಸೋಮವಾರ ಬೆಳಗ್ಗೆ ಮನೆಯಿಂದ ಹೊರಟು ಹಾರೋಹಳ್ಳಿ ಸಮೀಪ ವಿಶ್ವೇಶ್ವರಯ್ಯ ನಾಲೆಗೆ ಹಾರಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಕೋವಿಡ್​ ಪರೀಕ್ಷಾ ವರದಿ ಇನ್ನೂ ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.