ಬೆಂಗಳೂರು: ಇತ್ತೀಚೆಗೆ ಖಾಸಗಿ ಹೋಟೆಲ್ನಲ್ಲಿ ಲಸಿಕೆ ಕೊಡಿಸಿ ವಿವಾದಕ್ಕೆ ಒಳಗಾಗಿದ್ದ ಕಾಂಗ್ರೆಸ್ ಯುವ ಮುಖಂಡ ನಲಪಾಡ್, ಮತ್ತೊಂದು ಗೊಂದಲಕ್ಕೆ ಕಾರಣರಾಗಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗಾಗಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ದ ಪ್ರಸಂಗವೂ ನಡೆದಿದೆ.
ಕೋವಿಡ್ ಪರಿಸ್ಥಿತಿ ನಿರ್ವಹಣೆ ವೇಳೆ ನಲಪಾಡ್ ಅವರು ಗೊಂದಲಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಬೆಡ್ ಸಿಕ್ಕಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯನ್ನು ಸರ್ಕಾರಿ ಆಂಬುಲೆನ್ಸ್ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಬಂದಾಗ, ನಲಪಾಡ್ ಅಲ್ಲಿಗೆ ಕಾಂಗ್ರೆಸ್ ಕೇರ್ಸ್ ಆಂಬುಲೆನ್ಸ್ ಕರೆಸಿ ಅದೇ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದರು. ಇದರಿಂದ ಅಲ್ಲಿ ಪೊಲೀಸರು ಹಾಗೂ ನಲಪಾಡ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಗೊಂದಲ ಉಂಟಾದ್ದರಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನಾವು ಕೆಪಿಸಿಸಿ ಕಚೇರಿಯಲ್ಲಿ ಕೋವಿಡ್ ವಾರ್ರೂಮ್ನಲ್ಲಿದ್ದಾಗ, ಬೆಡ್ ಬೇಕು, ಬಿಯು ನಂಬರ್ ಇದ್ದರೂ ಬೆಡ್ ಸಿಗುತ್ತಿಲ್ಲ ಎಂದು ಮಹಿಳೆಯೊಬ್ಬರು ಕರೆ ಮಾಡಿ ಹೇಳಿದ್ದರು. ನಮ್ಮ ಕಾಂಗ್ರೆಸ್ ಕೇರ್ಸ್ ಸರ್ವಿಸ್ಗೆ ಕರೆ ಮಾಡಿದ್ದ ಆ ಮಹಿಳೆ, ವಿಧಾನಸೌಧದ ಬಳಿ ಇದ್ದೇನೆ ಎಂದಿದ್ದರಿಂದ ನೆರವು ನೀಡುವ ಸಲುವಾಗಿ ಅಲ್ಲಿಗೆ ತೆರಳಿದ್ದೆವು ಎಂದು ನಲಪಾಡ್ ತಿಳಿಸಿದ್ದಾರೆ. ಅಲ್ಲಿ ನಾವು ಇದನ್ನು ಪ್ರಿಪ್ಲ್ಯಾನ್ಡ್ ಆಗಿ ಮಾಡಿದ್ದೇವೆ ಎಂದು ಆರೋಪಿಸಿದ ಪೊಲೀಸರು ನಮ್ಮನ್ನು ವಶಕ್ಕೆ ಪಡೆದಿದ್ದರು. ಪ್ರಿವೆಂಟಿವ್ ಅರೆಸ್ಟ್ ಪ್ರಕ್ರಿಯೆ ನಡೆಸಿ ನಮ್ಮನ್ನು ಪೊಲೀಸರು ಬಿಟ್ಟು ಕಳಿಸಿದ್ದು, ಆ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದೆ ಎಂದು ನಲಪಾಡ್ ತಿಳಿಸಿದ್ದಾರೆ.