ಜಿಲ್ಲೆ

ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವವರಿಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ; ಬಿಎಸ್​ವೈ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Webdesk - Manjunatha B

ಮೈಸೂರು: 82ನೇ ವಯಸ್ಸಿನಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನನ್ನ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಈ ಸಂಬಂಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ನ್ಯಾಯಾಲಯದ ದಯೆಯಿಂದ ಹೊರಗಿರುವ ಅವರು ಈ ಹಿಂದೆಯೂ ಜೈಲಿಗೆ ಹೋಗಿ ಬಂದಿದ್ದಾರೆ. ಮಾಧ್ಯಮಗಳು ಈ ಬಗ್ಗೆ ಯಾಕೆ ಪ್ರಸಾರ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದ ಕಾರಣ ಅಧಿಕಾರ ಕಳೆದುಕೊಂಡರು. ಜತೆಗೆ ಜೈಲಿಗೂ ಹೋದರು. ಡಿನೋಟಿಫಿಕೇಷನ್ ಕೂಡ ಮಾಡಿದರು. ನಮ್ಮ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ನಾನು ಯಾವುದೇ ಆದೇಶ ನೀಡಿಲ್ಲ. ಯಾವುದೇ ಪತ್ರವನ್ನು ನೀಡಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಅವರ ಆರೋಪದಲ್ಲಿ ಸತ್ಯ ಇದ್ದರೆ ಅಲ್ವಾ ನಾನು ರಾಜೀನಾಮೆ ನೀಡೋದು ಎಂದರು.

ಬಿಜೆಪಿ ಮತ್ತು ಜೆಡಿಎಸ್‌ನವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ನನ್ನನ್ನು ಟಾರ್ಗೇಟ್ ಮಾಡುತ್ತಿದ್ದಾರೆ. ಮೊದಲು ಆಪರೇಷನ್ ಕಮಲ ಮಾಡಲು ಪ್ರಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ಹಾಗಾಗಿ, ಇದೀಗ ಜೆೆಡಿಎಸ್​ನವರ ಜೊತೆ ಸೇರಿ ರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ನವರ ಎಲ್ಲ ಅಕ್ರಮಗಳ ಬಗ್ಗೆ ಮಾತನಾಡುತ್ತೇನೆ.

ನಾನು ಬಡವರ ಪರ ಕೆಲ ಮಾಡುತ್ತಿದ್ದೇನೆ. ಬಡವರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದನ್ನು ಅವರು ಸಹಿಸುತ್ತಿಲ್ಲ. ಆರಂಭದಿಂದಲೂ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಪ್ರಧಾನಮಂತ್ರಿಗಳು ಕೂಡ ಗ್ಯಾರಂಟಿ ಜಾರಿ ಮಾಡಲು ಆಗಲ್ಲ. ಮಾಡಿದರೂ ಮಧ್ಯದಲ್ಲೇ ನಿಲ್ಲಿಸುತ್ತಾರೆ ಎಂದಿದ್ದರು. ಈಗ ನಾವು ನಿಲ್ಲಿಸಿದ್ದೇವಾ. ಒಂದು ವರ್ಷದಿಂದ ಎಲ್ಲಾ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ-ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.