ಬೆಂಗಳೂರು: ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕಚ್ಚಾ ಬಾಂಬ್ ಸ್ಫೋಟಿಸಿದ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಅಧಿಕಾರಿಗಳು ನಗರದ ವಿಶೇಷ ಎನ್‌ಐಎ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಶಿವಮೊಗ್ಗದ ಮಝ ಮುನೀರ್ ಅಹ್ಮದ್ (23) ಮತ್ತು ಸೈಯದ್ ಯಾಸೀನ್ (22) ಎಂಬುವರ ವಿರುದ್ಧ ಗುರುವಾರ ಆರೋಪಪಟ್ಟಿ ಸಲ್ಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ 2022ರ ಸೆ.19ರಂದು ಪ್ರಯೋಗಿಕ ಸ್ಫೋಟ ಸಂಬಂಧ ಪ್ರಕರಣ ದಾಖಲಾಗಿತ್ತು. ಇದರ ಹೆಚ್ಚಿನ ತನಿಖೆ ಸಲುವಾಗಿ ನ.4ರಂದು ಎನ್‌ಐಎ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಬಿಟೆಕ್ ಪದವಿ ಮುಗಿಸಿರುವ ಮುನೀರ್ ಮತ್ತು ಸೈಯದ್ ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದರು. ಹಿಂದುಗಳ ವಾಣಿಜ್ಯ ಮಳಿಗೆ, ಬಾರ್, ಹಾರ್ಡ್‌ವೇರ್ ಅಂಗಡಿ, ವಾಹನಗಳು ಸೇರಿದಂತೆ ಆಸ್ತಿಗಳ ಮೇಲೆ ಹಾನಿ ಮತ್ತು ಹಿಂದುಗಳ ಹತ್ಯೆ ಇವರ ಟಾರ್ಗೆಟ್ ಮಾಡಿದ್ದರು. ಈ ಇಬ್ಬರು ಸೇರಿಕೊಂಡು 25 ಕಡೆಗಳಲ್ಲಿ ಬಾಂಬ್ ಸ್ಫೋಟಗೊಳಿಸಿ ಪ್ರಯೋಗ ಮಾಡಿದ್ದಾರೆ.
ಇದನ್ನೂ ಓದಿ: ಭೂಸಿರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ನ ಮತ್ತೊಂದು ಕರ್ಮಕಾಂಡ; ಗ್ರಾಹಕರ 1.6 ಕೋಟಿ ರೂ. ದುರ್ಬಳಕೆ ಆರೋಪ
ಶಿವಮೊಗ್ಗದ ಆಗುಂಬೆ ವಾರಾಹಿ ನದಿ ದಡ, ಅರಣ್ಯ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಗೊಳಿಸಿದ್ದಾರೆ. ಇದರಲ್ಲಿ ಸೈಯದ್ ಯಾಸೀನ್ ಭಾಗವಹಿಸಿದ್ದ. ಘಟನಾ ಸ್ಥಳ ಪರಿಶೀಲನೆ ನಡೆಸಿದಾಗ ಎಲೆಕ್ಟ್ರಿಕಲ್ ಪ್ಯಾನಲ್, ಎಲ್‌ಇಡಿ ಬಲ್ಬ್, ಬೆಂಕಿಪೊಟ್ಟಣ, ವಯರ್, ಬ್ಯಾಟರಿ, ಸ್ಫೋಟಕ ವಸ್ತುಗಳು, ಡಿಜಿಟಲ್ ವಸ್ತುಗಳು ಮತ್ತು ಸುಟ್ಟ ರಾಷ್ಟ್ರ ಧ್ವಜ ಪತ್ತೆಯಾಗಿತ್ತು.
ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶಾರೀಕ್, ಇದರ ಪ್ರಮುಖ ಕಿಂಗ್‌ಪಿನ್ ಆಗಿದ್ದು, ಎನ್‌ಐಎ ಬಂಧನದಲ್ಲಿ ಇದ್ದಾನೆ. ಈತನ ಸಹಚರರಾದ ಬಂಧಿತ ಮಝಾ ಮುನೀರ್, ಉಗ್ರವಾದ ಬೋಧನೆ ಮಾಡಿ ಐಸಿಸ್‌ಗೆ ನೇಮಕ ಮಾಡಿದ್ದ. ಆನಂತರ ಮಜೀನ್, ಉಗ್ರವಾದ ಪ್ರಭಾವ ಬಳಸಿ ಸೈಯದ್ ಯಾಸೀನ್‌ನನ್ನು ಐಸಿಸ್‌ಗೆ ನೇಮಕವಾಗಿದ್ದ.
ಭಾರತಕ್ಕೆ ಬ್ರಿಟಿಷರಿಂದ ಸ್ವತಂತ್ರ ಬಂದಿದೆಯಷ್ಟೆ. ಮುಸ್ಲಿಮಯರಿಗೆ ಸ್ವತಂತ್ರ ಬರಬೇಕಾದರೆ ಭಾರತ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಅದುವೇ ಮುಸ್ಲಿಮರ ಹೋರಾಟ. ಭಾರತದಲ್ಲಿ ಖಿಲಾತ್ ಮತ್ತು ಷರಿಯತ್ ಕಾನೂನು ಜಾರಿಗೆ ತರುವುದು ಐಸಿಸ್ ಮೂಲ ಉದ್ದೇಶ ಹೊಂದಿದ್ದರು. ಶಿವಮೊಗ್ಗದ ಯಾಸಿನ್ ಮನೆಯಲ್ಲಿ ಬಾಂಬ್ ತಯಾರಿಸಲು ಬೇಕಾದ ಕಚ್ಛಾ ವಸ್ತುಗಳನ್ನು ಸಂಗ್ರಹಿಸಿ ಬಾಂಬ್ ತಯಾರು ಮಾಡಿದ್ದರು.
2022ರ ಆ.15ರಂದು ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ವೀರ ಸಾವರ್ಕರ್ ಫೋಟೋ ವಿವಾದದ ಪ್ರಕರಣದಲ್ಲಿ ಆರೋಪಿಗಳಾದ ಮೊಹಮ್ಮದ್ ಜಬೀವುಲ್ಲಾ, ತನ್ವೀರ್ ಅಮ್ಮದ್ ಮತ್ತು ನದೀಮ್ ಫೈಸಲ್ ಎಂಬುವರನ್ನು ಬಂಧಿಸಲಾಗಿತ್ತು. ಇವರ ವಿಚಾರಣೆ ವೇಳೆ ಶಂಕಿತ ಉಗ್ರರರಾದ ಶಾರೀಕ್, ಮಝ ಮತ್ತು ಸಿದ್ದೇಶ್ವರದ ಸೈಯದ್ ಯಾಸಿನ್ ಕುರಿತು ಸ್ಫೋಟಕ ಮಾಹಿತಿ ಬಯಲಿಗೆ ಬಂದಿತ್ತು.
ವ್ಯಾಪಾರಿಗಳ ಕೊಲೆ ಯತ್ನ: ಶಿವಮೊಗ್ಗ ನಗರ ಎ.ಎ.ಸರ್ಕಲ್‌ನಲ್ಲಿ 2022ರ ಆ.15ರಂದು ವೀರ ಸವಾರ್ಕರ್ ಫೋಟೋ ಅಳವಡಿಸಿ ವಿವಾದದಲ್ಲಿ ಹಿಂದುಗಳು ಎಂಬ ಕಾರಣಕ್ಕೆ ರಾಜಸ್ಥಾನ ಮೂಲದ ವ್ಯಾಪಾರಿಗಳಾದ ಪ್ರೇಮ್ ಸಿಂಗ್ ಮತ್ತು ಸರವಣ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಉಗ್ರವಾದಕ್ಕೆ ಕ್ರಿಪ್ಟೋ ಕರೆನ್ಸಿ: ಐಸಿಸ್ ಕಡೆಯಿಂದ ಶಂಕಿತರು ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಸಂಗ್ರಹಿಸುತ್ತಿದ್ದರು. ವಿದೇಶಿದಿಂದ ಕ್ರಿಪ್ಟೋ ಕರೆನ್ಸಿ ಮೂಲಕ ಮಝ ಬ್ಯಾಂಕ್ ಖಾತೆಗೆ 1.5 ಲಕ್ಷ ರೂ. ಸಂದಾಯವಾಗಿದೆ. ಅದೇ ರೀತಿ ಸೈಯದ್ ಬ್ಯಾಂಕ್ ಖಾತೆಗೆ ಆನ್‌ಲೈನ್‌ನಲ್ಲಿ 62 ಸಾವಿರ ರೂ. ಜಮೆ ಆಗಿರುವುದು ಬೆಳಕಿಗೆ ಬಂದಿದೆ. ಇವರೊಂದಿಗೆ ಸಂಪರ್ಕದಲ್ಲಿದ್ದ ಶಾರೀಕ್, 2022ರ ನ.19ರಂದು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಬಾಂಬ್ ಅಳವಡಿಸಲು ಆಟೋದಲ್ಲಿ ಐಇಡಿ ಸಾಗಿಸುವಾಗ ಮಾರ್ಗಮಧ್ಯೆ ಸ್ಫೋಟವಾಗಿತ್ತು.