ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಕ್ಷಮೆಯನ್ನು ಕೋರಿದ್ದಾರೆ. ಜೊತೆಗೆ ಎಲ್ಲದಕ್ಕೂ ನಾನೊಬ್ಬಳೇ ಹೊಣೆಯಲ್ಲ ಎಂಬುದನ್ನೂ ಒತ್ತಿ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ನಡೆಸಿದ ಸಂವಾದ ಸಂದರ್ಭದಲ್ಲಿ ಅವರು ಇಂಥದ್ದೊಂದು ಕ್ಷಮೆ ಯಾಚಿಸಿದ್ದಾರೆ.
ಕರ್ನಾಟಕದಿಂದ ಆಯ್ಕೆಯಾಗಿ ಹೋದರೂ ಈ ರಾಜ್ಯದ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿದೆ ಎಂಬುದಾಗಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆ ನಿಮ್ಮದೋ ಜನರದ್ದೋ ಎಂದು ವರದಿಗಾರರನ್ನೇ ಮರುಪ್ರಶ್ನಿಸಿದ್ದಾರೆ. ಇದು ಜನರ ಪ್ರಶ್ನೆ ಎಂದು ವರದಿಗಾರ ಸ್ಪಷ್ಟಪಡಿಸುತ್ತಿದ್ದಂತೆ, ಬಹಳ ಬುದ್ಧಿವಂತಿಕೆಯಿಂದ ಪ್ರಶ್ನೆ ಕೇಳಿದ್ದೀರಿ ಎಂದ ಸಚಿವೆ, ರಾಜ್ಯಕ್ಕಾಗಿ ತಾವು ಮಾಡಿದ ಕೆಲಸದ ಕುರಿತ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?
ನಾನು ಇಲ್ಲಿಂದ ಆಯ್ಕೆ ಆಗಿ ಹೋಗಿದ್ದೇನೆ. ಆದರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ. ಅದಕ್ಕಾಗಿ ಕ್ಷಮೆ ಇರಲಿ ಎಂದ ನಿರ್ಮಲಾ ಸೀತಾರಾಮನ್, ಬಹಳಷ್ಟು ಜನ ಇಲ್ಲಿಂದ ಆಯ್ಕೆ ಆಗಿ ಹೋಗಿದ್ದಾರೆ, ಎಲ್ಲದಕ್ಕೂ ನಾನೊಬ್ಬಳೇ ಹೊಣೆಯಲ್ಲ ಎಂಬ ಸಮಜಾಯಿಷಿಯನ್ನೂ ನೀಡಿದರು.