ವಿಜಯಪುರ: ಸರ್ಕಾರದ ಯೋಜನೆಯೊಂದರ ಮಾಹಿತಿ ಕೇಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬಂದ ಪ್ರಾದೇಶಿಕ ಪಕ್ಷವೊಂದರ ಕಾರ್ಯಕರ್ತರಿಗೆ ಖಾಸಗಿ ವ್ಯಕ್ತಿಯೋರ್ವ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಇದೀಗ ಕೊಲೆ ಯತ್ನದವರೆಗೂ ಬಂದು ನಿಂತಿದೆ.
ಭೀಮಾತೀರದ ಚಡಚಣದಲ್ಲಿ ದಿನಕ್ಕೆ ನಾಲ್ಕು ಆಕಳು ಕಡೆಯುವ ಬಗ್ಗೆ, ಬೈಕ್ ಮೇಲೆ ಹೊರಟಾಗ ಲಾರಿ ಹಾಯಿಸಿ ಸಾಯಿಸುವ ಬಗ್ಗೆ, ಅಧಿಕಾರಿಗಳಾರೂ ಸಾಚಾ ಅಲ್ಲ; ಐದು ಲಕ್ಷ ಕೊಟ್ಟರೆ ಪೊಲೀಸರೂ ಸುಮ್ಮನಿರುತ್ತಾರೆ ಎಂದೆಲ್ಲಾ ಫುಂಖಾನುಫುಂಖವಾಗಿ ಮಾತನಾಡಿದ್ದ ವ್ಯಕ್ತಿಯೇ ಇದೀಗ ಕೊಲೆಯತ್ನದ ಆರೋಪ ಹೊತ್ತಿದ್ದು, ನೊಂದ ಕಾರ್ಯಕರ್ತ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಎರಡೂ ಕಡೆಯವರಿಂದ ದೂರು ದಾಖಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಚಡಚಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಗೆ ಮಾಹಿತಿ ಕೇಳಲು ಹೋದಾಗ ಸೋಮಶೇಖರ ಪಟ್ಟಣಶೆಟ್ಟಿ ಎಂಬಾತ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರಿಗೆ ಜೀವ ಬೆದರಿಕೆಯೊಡ್ಡಿದ್ದನು. ಈ ಬಗ್ಗೆ ಆಗಲೇ ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆಗೆ ಮನವಿ ಸಹ ಸಲ್ಲಿಸಲಾಗಿತ್ತು. ಮಾತ್ರವಲ್ಲ ಎಫ್‌ಐಆರ್ ಕೂಡ ದಾಖಲಿಸಲಾಗಿತ್ತು. ಮಾತ್ರವಲ್ಲ, ಹಣ ಬೇಕಾದರೆ ತಗೊಳ್ಳಿ, ಅಂಗನವಾಡಿಗೆ ಕಿರಿಕಿರಿ ಮಾಡುವಂಗಿಲ್ಲ ಎಂದೆಲ್ಲ ಧಮ್ಕಿ ಹಾಕಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಅಕ್ರಮ, ಕೊಲೆ, ಹಗರಣ, ಭ್ರಷ್ಟಾಚಾರ ವಿಚಾರಗಳ ಕುರಿತು ಪಟ್ಟಣಶೆಟ್ಟಿ ಮಾತನಾಡಿದ್ದರು. ಆ ಬಳಿಕ ಪ್ರಕರಣ ತಣ್ಣಗಾಗಿತ್ತು.
ಇದೀಗ ಮೇ 16ರಂದು ಕೆಆರ್‌ಎಸ್ ಪಕ್ಷದ ಕಾರ್ಯಕರ್ತ ರಾಯಗೊಂಡ ರಾಮು ಕೋಳಿ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಮುಖಕ್ಕೆ ಮುಸುಕು ಹಾಕಿಕೊಂಡು ಬಂದ ಸೋಮಶೇಖರ ಚನ್ನಪ್ಪಾ ಪಟ್ಟಣಶೆಟ್ಟಿ, ಚನ್ನಪ್ಪಾ ಪಟ್ಟಣಶೆಟ್ಟಿ, ಶ್ರೀಶೈಲ ಚನ್ನಪ್ಪಾ ಪಟ್ಟಣಶೆಟ್ಟಿ ಹಾಗೂ ಭೀಮು ಪಟ್ಟಣಶೆಟ್ಟಿ ಎಂಬುವರು ಮಾರಣಾಂತಿಕ ಹಲ್ಲೆ ಮಾಡಿ ತಾಯಿ, ಅಕ್ಕ-ತಂಗಿಯರನ್ನು ನಿಂದಿಸಿ ಚಿನ್ನ ಹಾಗೂ ಹಣ ಕದ್ದೊಯ್ದಿದ್ದಾಗಿ ದೂರು ದಾಖಲಿಸಲಾಗಿದೆ. ಕುತ್ತಿಗೆಗೆ ಮೇಲೆ ಚಾಕು ಇಟ್ಟು ‘ಪೊಲೀಸ್‌ರಿಗೆ ದೂರು ನೀಡುತ್ತಿಯಾ?’ ಎಂದು ಹೆದರಿಸಿ ಹಿಗ್ಗಾ ಮುಗ್ಗಾ ತಳಿಸಿದ್ದಲ್ಲದೇ ‘ನನ್ನ ವಿರುದ್ಧ ದೂರು ಕೊಟ್ಟರೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರನ್ನು ಬಿಡುವುದಿಲ್ಲ’ ಎನ್ನುತ್ತಾ ಹೊಡೆದು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆಂದು ಗಾಯಾಳು ರಾಯಗೊಂಡ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ತತ್ತಿ ಮೊಟ್ಟೆ ಕಳವು ಮಾಡುವ, ಕೆಆರ್‌ಎಸ್ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಚಡಚಣ ಠಾಣೆಯಲ್ಲಿ ಎಎಸ್‌ಐ ಕುರ್ಚಿಯನ್ನೇ ಬಿಟ್ಟುಕೊಡಲಾಗಿದೆ. ಎಎಸ್‌ಐ ಕಚೇರಿ ಮೇಲೆ ಕುಳಿತುಕೊಂಡು ಆತ ದೂರು ನೀಡುತ್ತಾನೆಂದರೆ ವ್ಯವಸ್ಥೆ ಹೇಗಿರಬೇಡ? ಅಂಗನವಾಡಿ ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದರೆ ಹಲ್ಲೆ ನಡೆಸುತ್ತಾರೆಂದರೆ ಯಾವ ವ್ಯವಸ್ಥೆಯಲ್ಲಿದ್ದೇವೆ? ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.