ಭೀಮಾತೀರದಲ್ಲಿ ದಿನಾ ಆಕಳು ಕಡಿಯುತ್ತಾರಂತೆ, ಲಾರಿ ಹಾಯಿಸಿ ಸಾಯಿಸ್ತಾರಂತೆ, ಪೊಲೀಸರೂ ಸಾಚಾ ಅಲ್ವಂತೆ... ಅಬ್ಬಬ್ಬಾ...ಏನಿದು ಭಯಾನಕ ಸಂಗತಿ?

CHADACHANA KRS
ವಿಜಯಪುರ ಜಿಲ್ಲಾಡಳಿತಕ್ಕೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮನವಿ ಸಲ್ಲಿಸಿದರು. ಲಕ್ಷ್ಮಣ ಚಣಚಣ, ದುರ್ಗಪ್ಪ ಬೂದಿಹಾಳ, ರಮ್ಜಾನ್ ಕೊಂಕಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ಭೀಮಾತೀರದ ಚಡಚಣದಲ್ಲಿ ದಿನಕ್ಕೆ ನಾಲ್ಕು ಆಕಳು ಕಡೆಯುತ್ತಾರಂತೆ, ಬೈಕ್ ಮೇಲೆ ಹೊರಟಾಗ ಲಾರಿ ಹಾಯಿಸಿ ಸಾಯಿಸ್ತಾರಂತೆ, ಅಧಿಕಾರಿಗಳಾರೂ ಸಾಚಾ ಅಲ್ವಂತೆ, ಐದು ಲಕ್ಷ ಕೊಟ್ಟರೆ ಪೊಲೀಸರೂ ಸುಮ್ಮನಿರುತ್ತಾರಂತೆ...ಅಬ್ಬಬ್ಬಾ...ಇದೇನಿದು ಭಯಾನಕ ವಿಷಯ....?

ಸರ್ಕಾರಿ ಕಚೇರಿಯಲ್ಲಿ ಕುಳಿತು ಹೀಗೆ ಫುಂಖಾನುಫುಂಖವಾಗಿ ಮಾತನಾಡುವ ವ್ಯಕ್ತಿ ಯಾರು? ಅಧಿಕಾರಿಗೂ ಈತನಿಗೂ ಏನು ಸಂಬಂಧ? ಇಷ್ಟೆಲ್ಲಾ ಅಕ್ರಮ ಬಯಲಿಗೆಳೆದ ಈತನನ್ನು ತನಿಖೆಗೆ ಒಳಪಡಿಸಬಾರದೇಕೆ? ಇನ್ನೂ ಹೆಚ್ಚಿನ ಅಕ್ರಮ ಕುರಿತಾದ ಮಾಹಿತಿ ಈತನ ಬಳಿ ಇರಬೇಕಲ್ಲವೆ? ತನಿಖೆ ನಡೆಸಿದರೆ ಆಕಳು ಕಡಿಯುವ ಅಕ್ರಮ ದಂಧೆ, ಪೊಲೀಸರ ಭ್ರಷ್ಟಾಚಾರ, ಅಧಿಕಾರಿಗಳ ಹಗರಣ, ಕೊಲೆಗಡುಕರ ಮಾಹಿತಿ ಹೊರಬೀಳಬಹುದಲ್ಲವಾ’ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಅಂದಹಾಗೆ ಇಂಥದ್ದೊಂದು ಭಯಾನಕ ಹೇಳಿಕೆ ಕಂಡು-ಕೇಳಿ ಬಂದಿರುವುದು ಚಡಚಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ. ಕಚೇರಿಯಲ್ಲಿ ರಾಜಾರೋಷವಾಗಿ ಕುಳಿತು ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರಿಗೆ ಬೆದರಿಕೆಯುಡುತ್ತಲೇ ಇಂಥ ಭಯಾನಕ ಸಂಗತಿ ಬಿಚ್ಚಿಟ್ಟ ಈತನ ಹೆಸರು ಸೋಮಶೇಖರ ಪಟ್ಟಣಶೆಟ್ಟಿ ಎಂದು ತಿಳಿದು ಬಂದಿದೆ. ಈತನ ಹೇಳಿಕೆಯ ವಿಡಿಯೋ ತುಣುಕುಗಳೆಲ್ಲ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು, ಪೊಲೀಸ್ ಇಲಾಖೆ ಈತನನ್ನು ವಿಚಾರಣೆಗೆ ಒಳಪಡಿಸಬಾರದೇಕೆ ಎಂಬ ಪ್ರಶ್ನೆ ಎದುರಾಗಿದೆ.

ಏನಿದೆ ವಿಡಿಯೋದಲ್ಲಿ?

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕ ಹಿತಾಸಕ್ತಿಯನ್ನಿಟ್ಟುಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಅಲ್ಲಿನ ಅಧಿಕಾರಿ ವರ್ಗ ಮಾಹಿತಿ ನೀಡಲು ಮೀನಮೇಷ ಎಣಿಸುತ್ತಿದೆ. ಅಧಿಕಾರಿಗಳ ಈ ವಿಳಂಬ ನೀತಿಯೇ ಹಗರಣ ನಡೆದಿದೆ ಎಂಬುದಕ್ಕೆ ಪುಷ್ಠಿ ನೀಡುತ್ತಿದ್ದು, ಈ ಬಗ್ಗೆ ವಿಚಾರಿಸಲೆಂದು ಸರ್ಕಾರಿ ಕಚೇರಿಗೆ ತೆರಳಿದಾಗ ಈ ಸೋಮಶೇಖರ ಪಟ್ಟಣಶೆಟ್ಟಿ ಎಂಬಾತ ಅಧಿಕಾರಿ ಪರ ವಕಾಲತ್ತು ವಹಿಸಿ ಭಯಾನಕ ಸಂಗತಿಗಳನ್ನು ಬಿಚ್ಚಿಡುತ್ತಲೇ ಸಂಘಟಕರಿಗೂ ಬೆದರಿಕೆಯೊಡುತ್ತಾನೆ.

ಹಣ ಬೇಕಾದರೆ ತಗೊಳ್ಳಿ, ಅಂಗನವಾಡಿಗೆ ಕಿರಿಕಿರಿ ಮಾಡುವಂಗಿಲ್ಲ ಎನ್ನುತ್ತಾನೆ. ಅಲ್ಲದೇ, ಬಾಗಪ್ಪ ಹರಿಜನನ್ನೇ ಬಿಟ್ಟಿಲ್ಲ...ಇಲ್ಲಿ ಜನ ಸರಿಯಿಲ್ಲ ಎನ್ನುತ್ತಾನಲ್ಲದೇ ಬೈಕ್ ಮೇಲೆ ಹೊರಟಾಗ ಲಾರಿ ಹಾಯಿಸಿದರೆ ಮುಗೀತು ಕೆಲಸ ಎನ್ನುವುದು ನೋಡಿದರೆ ಜೀವ ಬೆದರಿಕೆಯಾ? ಇಂಥದ್ದೇ ಕೃತ್ಯ ಮೊದಲು ಮಾಡಿರಬಹುದಾ? ಎಂಬೆಲ್ಲಾ ಸಂಶಯಗಳು ಕಾಡುತ್ತಿವೆ. ಐದು ಲಕ್ಷ ಕೊಟ್ಟರೆ ಪೊಲೀಸರು ಸಹ ಹೂಂ ಎನ್ನುತ್ತಾರಂತೆ, ಯಾರೂ ಸಾಚಾ ಅಲ್ಲ ಎಂದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ವಿಡಿಯೋ ಮಾಡಿದ್ದಲ್ಲದೇ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಈ ವ್ಯಕ್ತಿಗೆ ತನಿಖೆಗೆ ಒಳಪಡಿಸಿದರೆ ಅಕ್ರಮ, ಕೊಲೆ, ಹಗರಣ, ಭ್ರಷ್ಟಾಚಾರ ಎಲ್ಲವೂ ಬಯಲಾಗಬಹುದೆನ್ನುತ್ತಿದ್ದಾರೆ ಜನ.

ಪೊಲೀಸ್-ಜಿಲ್ಲಾಡಳಿತಕ್ಕೆ ಕೆಆರ್‌ಎಸ್ ಮನವಿ:

ಚಡಚಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ಭ್ರಷ್ಟಾಚಾರ ತನಿಖೆ ಮತ್ತು ವಿಡಿಯೋದಲ್ಲಿ ದಾಖಲಾದ ಅಕ್ರಮ, ಕೊಲೆ, ಹಗರಣ, ಭ್ರಷ್ಟಾಚಾರದ ಹೇಳಿಕೆ ನೀಡಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಗುತ್ತಿ ಬಸವೇಶ್ವರ ಮ್ಯಾನ್ ಪವರ್ ಏಜೆನ್ಸಿ ಮೂಲಕ ಮಕ್ಕಳಿಗೆ ನೀಡುವ ಮೊಟ್ಟೆ ಕಳ್ಳತನ ಮಾಡಿರುವ ಬಗ್ಗೆ ತನಿಖೆ ನಡೆಸಬೇಕೆಂದಿದ್ದಾರೆ. ಇಲಾಖೆಯ ಮಾಹಿತಿ ಕೇಳಲು ಹೋದ ಚಂದ್ರಕಾಂತ ನಗರೆ ಹಾಗೂ ಲಕ್ಷ್ಮಣ ಚಣಚಣ ಸೇರಿದಂತೆ 5 ಜನರಿಗೆ ಮಾಹಿತಿ ನೀಡದೇ ಬಾಡಿಗೆ ಗುಂಡಾನನ್ನು ಬಳಸಿಕೊಂಡು ಸಿಡಿಪಿಒ ಜೀವ ಬೆದರಿಕೆ ಹಾಕಿದ್ದಾರೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಚಡಚಣ ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು ಕೆಆರ್‌ಎಸ್ ಪಕ್ಷದ ಅಣ್ಣಪ್ಪ ಪೂಜಾರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಣಚಣ, ಜಿಲ್ಲಾ ಕಾರ್ಯದರ್ಶಿ ದುರ್ಗಪ್ಪ ಬೂದಿಹಾಳ, ರಮ್ಜಾನ್ ಕೊಂಕಣಿ, ಗೋರ್ಕನಾಥ ಚವಾಣ್, ವಿಕ್ರಂ ವಾಘ್ಮೋರೆ, ಅಣ್ಣಪ್ಪ ಪೂಜಾರಿ, ಸದಾಶಿವ ಹಜೇರಿ, ಮಲ್ಲು ಬಿರಾದಾರ, ರಾವತಪ್ಪಾ ಇನ್ನಿತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net