

ವಿಜಯಪುರ: ಸಕಾಲಕ್ಕೆ ಮಾಹಿತಿ ನೀಡದ ಅಧಿಕಾರಿ, ಕಚೇರಿಗೆ ಬಂದರೆ ಗುಂಡಾಗಳ ಹಾವಳಿ, ಮೊಟ್ಟೆ ವಿತರಣೆಯಲ್ಲಿ ಗೋಲ್‌ಮಾಲ್, ಅಂಗನವಾಡಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ...!
ಇದಿಷ್ಟು ಭೀಮಾತೀರದ ಚಡಚಣ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಂಡು-ಕೇಳಿ ಬರುತ್ತಿರುವ ಆಪಾದನೆಗಳು.
ಇಡೀ ಇಲಾಖೆಯೇ ಹಗರಣ-ಭ್ರಷ್ಟಾಚಾರದ ಕೂಪವಾಗಿದೆ ಎಂಬುದು ಸಾಮಾಜಿಕ ಸಂಘಟನೆಗಳ ಆರೋಪವಾದರೆ ಸ್ಪಷ್ಟ ಮಾಹಿತಿ, ನಿಖರ ದಾಖಲೆ, ಭ್ರಷ್ಟಾಚಾರದ ಸಾಕ್ಷಿ ನೀಡಿದರೆ ಕ್ರಮ ನಿಶ್ಚಿತ ಎನ್ನುತ್ತಾರೆ ಅಲ್ಲಿನ ಸಿಡಿಪಿಒ ಸಾಹೇಬಗೌಡ ಜುಂಜರವಾಡ.
ಆದರೆ, ಕಳೆದ ಹಲವು ತಿಂಗಳುಗಳಿಂದ ಸ್ಥಳೀಯ ಅಂಗನವಾಡಿಗಳಿಗೆ ಭೇಟಿ ನೀಡಿದ ವಿಡಿಯೋಗಳು, ಫೋಟೊಗಳನ್ನು ಹಂಚಿಕೊಳ್ಳುವ ಸಂಘಟನೆಗಳ ಪ್ರಮುಖರು ಆ ಬಗ್ಗೆ ಕ್ರಮ ಕೈಗೊಂಡ ಉದಾಹರಣೆಯೇ ಇಲ್ಲವೆನ್ನುತ್ತಾರೆ. ಅದರ ಕೆಲವು ವಿಡಿಯೋ ತುಣುಕು ‘ವಿಜಯವಾಣಿ’ ಜೊತೆಗೂ ಹಂಚಿಕೊಂಡಿದ್ದು, ಕಡಿಮೆ ಮೊಟ್ಟೆ ಕೊಡುತ್ತಿರುವ ಬಗ್ಗೆ ಅಂಗನವಾಡಿಯ ಮಹಿಳೆಯೋರ್ವಳು ಒಪ್ಪಿಕೊಳ್ಳುತ್ತಾರಲ್ಲದೇ ಎಲ್ಲ ಕಡೆ ಇಷ್ಟನ್ನೇ ಕೊಡುತ್ತಿರುವ ಕಾರಣ ತಾವೂ ಸಹ ಕಡಿಮೆ ನೀಡುತ್ತಿರುವುದಾಗಿ ಒಪ್ಪಿಕೊಳ್ಳುತ್ತಾರೆ.
ಇಷ್ಟೆಲ್ಲಾ ನಡೆದರೂ ಸಂಬಂಧಿಸಿದ ಹಿರಿಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಜಾಣ ಕುರುಡು ನೀತಿ ಅನುಸರಿಸುತ್ತಿರುವುದು ಸಾರ್ವಜನಿಕರಲ್ಲಿ ಹೇವರಿಕೆ ತರಿಸಿದೆ.
ಕಳೆದೊಂದು ವಾರದ ಹಿಂದೆ ಚಡಚಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಸಗಿ ವ್ಯಕ್ತಿಯ ದಬ್ಬಾಳಿಕೆ, ದೌರ್ಜನ್ಯದ ಮಾತುಗಳ ವಿಡಿಯೋದ ತೀವ್ರ ಸದ್ದು ಮಾಡಿತ್ತು. ಮುಂದುವರಿದ ಭಾಗವಾಗಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಯೂ ಆಗುತ್ತಿದೆ. ಅಧಿಕಾರಿಯೋರ್ವನ ಕುಮ್ಮಕ್ಕಿನಿಂದಲೇ ಖಾಸಗಿ ವ್ಯಕ್ತಿಯೋರ್ವ ಸರ್ಕಾರಿ ಕಚೇರಿಯಲ್ಲಿ ಕುಳಿತು ‘ಜೀವ ಬೆದರಿಕೆ, ಅಕ್ರಮವಾಗಿ ದನ ಕಡಿಯುವುದು, ಲಾರಿ ಹಾಯಿಸಿ ಕೊಲ್ಲುವುದು...’ ಹೀಗೆ ಮುಂತಾದ ಅಕ್ರಮ ಚಟುವಟಿಕೆಗಳ ಕುರಿತು ಮಾತನಾಡಿದ್ದಾನೆಂಬುದು ಸಾಮಾಜಿಕ ಸಂಘಟನೆಗಳ ಆರೋಪವಾಗಿತ್ತು. ಆದರೆ, ಈ ಬಗ್ಗೆ ಸಿಡಿಪಿಒ ಸಾಹೇಬಗೌಡ ಜುಂಜರವಾಡ ಅವರನ್ನು ಸಂಪರ್ಕಿಸಲಾಗಿ, ಸರ್ಕಾರಿ ಕಚೇರಿಯಲ್ಲಿ ಕುಳಿತು ಮಾತನಾಡಿದ ವ್ಯಕ್ತಿ ಯಾರೆಂಬುದು ಗೊತ್ತಿಲ್ಲವೆಂದು, ತಮಗೂ ಅದಕ್ಕೂ ಸಂಬಂಧವಿಲ್ಲವೆಂದು ಮತ್ತು ಆತನ ಮೇಲೆ ಆಗ ಕಚೇರಿಯಲ್ಲಿದ್ದ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿಸಿದ್ದಾರೆ.
ಹಾಗಾದರೆ ಆತನ ಮೇಲೆ ಎಫ್‌ಐಆರ್ ದಾಖಲಾಗಿದೆಯಾ? ಅಸಲಿಗೆ ಆತ ಯಾರು? ತನಿಖೆ ಕೈಗೊಳ್ಳಲಾಗಿದೆಯಾ? ಎಂಬುದೆಲ್ಲವೂ ನಿಗೂಢ.
ಶಿಶು ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗಳಿಗೆ ನೀಡುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪವೂ ಬಲವಾಗಿದೆ. ಈ ಹಿಂದೆ ಗುತ್ತಿ ಬಸವವೇಶ್ವರ ಮ್ಯಾನ್ ಪವರ್ ಮ್ಯಾನ್‌ಪವರ್ ಏಜೆನ್ಸಿಯಿಂದ ಪೂರೈಕೆಯಾಗಿರುವ ಮೊಟ್ಟೆ ವಿವರ ಕೇಳಿದರೆ ಅಧಿಕಾರಿ ಮಾಹಿತಿ ನೀಡಲು ಮೀನಮೇಷ ಎಣಿಸುತ್ತಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ವಿಳಂಬ ನೀತಿ ಅನುಸರಿಸುತ್ತಾರೆ. ಮೇಲ್ಮನವಿ ಸಲ್ಲಿಸಿಲಾಗಿ ಏಳು ದಿನದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರೂ ಬೇಜವಾಬ್ದಾರಿಯಾಗಿ ವರ್ತಿಸುತ್ತಾರಲ್ಲದೇ ಬಾಡಿಗೆ ಗುಂಡಾಗಳ ಮೂಲಕ ಹೆದರಿಸುತ್ತಿದ್ದಾರೆಂದು ಕೆಆರ್‌ಎಸ ಪಕ್ಷದ ಮುಖಂಡ ಚಂದ್ರಕಾಂತ ನಗರೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ನೀಡಿದ ದೂರಿನಲ್ಲಿ ತಿಳಿಸುತ್ತಾರೆ.
ಈ ಕುರಿತು ಸಿಡಿಪಿಒ ಸಾಹೇಬಗೌಡ ಜುಂಜರವಾಡ ಅವರನ್ನು ಪ್ರಶ್ನಿಸಿದರೆ, ಎರಡು ವರ್ಷದ ಹಿಂದೆಯೇ ಏಜೆನ್ಸಿ ಸ್ಥಗಿತಗೊಂಡಿದೆ. ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ದಾರೆ, ಆ ಪ್ರಕಾರ ಏನೆಲ್ಲ ನಿಯಮಾವಳಿಗಳಿವೆಯೂ ಅನುಸರಿಸಲಾಗುತ್ತಿದೆ ಎನ್ನುತ್ತಾರೆ. ಹಾಗಾದರೆ ಮಾಹಿತಿ ಕೇಳಲು ಹಕ್ಕು ಚಲಾಯಿಸಲೇಬೇಕಾ? ಹಾಗಾದರೆ ಪಾರದರ್ಶಕ ಆಡಳಿತಕ್ಕೆ ಬೆಲೆ ಎಲ್ಲಿದೆ? ಹಕ್ಕು ಚಲಾಯಿಸಿದರೂ ವಿಳಂಬವೇಕೆ? ಅಧಿಕಾರಿಯ ಈ ವರ್ತನೆ ಹಗರಣ ಮತ್ತು ಭ್ರಷ್ಟಾಚಾರದ ಗುಮಾನಿ ಹುಟ್ಟಿಸುವುದಿಲ್ಲವೇ? ಲೋಕಾಯುಕ್ತದಂಥ ಇಲಾಖೆಗಳು ಏನು ಮಾಡುತ್ತಿವೆ? ಎಂಬುದು ಸಂಘಟಕರ ಪ್ರಶ್ನೆ.