

ವಿಜಯಪುರ: ಅಂಗನವಾಡಿಗಳಲ್ಲಿ ವಿತರಣೆಯಾಗುವ ಮೊಟ್ಟೆಗೆ ಸಂಬಂಧಿಸಿದಂತೆ ದಾಖಲೆ ಕೇಳಲು ಹೋದ ಪ್ರಾದೇಶಿಕ ಪಕ್ಷವೊಂದರ ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಚಡಚಣದ ಸೋಮಶೇಖರ ಚನ್ನಪ್ಪ ಪಟ್ಟಣಶೆಟ್ಟಿ ಎಂಬುವರ ಮೇಲೆ ದೂರು ದಾಖಲಾಗಿದೆ. ಕೆಆರ್‌ಎಸ್ ಪಕ್ಷದ ಚಡಚಣ ತಾಲೂಕಾಧ್ಯಕ್ಷ ಚಂದ್ರಕಾಂತ ನಗರೆ ಎಂಬುವರು ದೂರು ದಾಖಲಿಸಿದ್ದಾರೆ.
ಕಳೆದ ಫೆ. 18 ರಂದು ದೂರುದಾರ ಚಂದ್ರಕಾಂತ ನಗರೆ ಹಾಗೂ ಕೆಆರ್‌ಎಸ್ ಪಕ್ಷದ ಲಕ್ಷ್ಮಣ ಮಲಕಾರಿ ಚಡಚಣ, ರಾಯಗೊಂಡ ರಾಮ ಕೋಳಿ, ರಂಜಾನ್ ಅಬ್ದುಲ್ ಕೊಂಕಣಿ, ನಾಗೇಶ ಸರಸಂಬಿ ಚಡಚಣದ ಸಿಡಿಪಿಒ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಮೊಟ್ಟೆ ವಿತರಣೆಗೆ ಸಂಬಂಧಿಸಿದಂತೆ ದಾಖಲೆ ಕೇಳುತ್ತಿದ್ದಾಗ, ಖಾಸಗಿ ವ್ಯಕ್ತಿಯಾಗಿರುವ ಸೋಮಶೇಖರ ಎಂಬಾತ ದಾಖಲೆ ಕೇಳದಂತೆ ಬೆದರಿಕೆ ಹಾಕಿದ್ದರು. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚಂದ್ರಕಾಂತ ನಗರೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿತ ಸೋಮಶೇಖರ ಪಟ್ಟಣಶೆಟ್ಟಿ ಮಾತನಾಡಿದ ವಿಡಿಯೋ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಚಡಚಣದಲ್ಲಿ ದಿನಕ್ಕೆ ನಾಲ್ಕು ಆಕಳು ಕಡೆಯುತ್ತಾರಂತೆ, ಬೈಕ್ ಮೇಲೆ ಹೊರಟಾಗ ಲಾರಿ ಹಾಯಿಸಿ ಸಾಯಿಸ್ತಾರಂತೆ, ಅಧಿಕಾರಿಗಳಾರೂ ಸಾಚಾ ಅಲ್ವಂತೆ, ಐದು ಲಕ್ಷ ಕೊಟ್ಟರೆ ಪೊಲೀಸರೂ ಸುಮ್ಮನಿರುತ್ತಾರಂತೆ...ಎಂದೆಲ್ಲಾ ವಿಡಿಯೋದಲ್ಲಿ ಭಯಾನಕ ಅಂಶಗಳನ್ನು ಬಾಯಿಬಿಟ್ಟಿದ್ದರು. ಈ ಬಗ್ಗೆ ಸೋಮಶೇಖರನನ್ನು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಲಾಗಿತ್ತಾದರೂ ಈವರೆಗೆ ಆರೋಪಿತನ ಸೋಮಶೇಖರನನ್ನು ಬಂಧಿಸಿಲ್ಲವೆಂದು ದೂರುದಾರ ನಗರೆ ಆರೋಪಿಸಿದ್ದಾರೆ.
ಈ ಹಿಂದೆ ಸಿಡಿಪಿಒ ಸಹ ತಮ್ಮ ಸಿಬ್ಬಂದಿ ಸೋಮಶೇಖರನ ಮೇಲೆ ದೂರು ದಾಖಲಿಸಿದ್ದಾಗಿ ತಿಳಿಸಿದ್ದರು. ಆದರೂ ಈವರೆಗೆ ಸೋಮಶೇಖರನನ್ನು ಬಂಧಿಸದೇ ಇರುವುದು ನೋಡಿದರೆ ಇದರ ಹಿಂದೆ ದೊಡ್ಡ ಜಾಲವೇ ಇರುವುದು, ಕಾಣದ ಕೈಗಳು ಕೆಲಸ ಮಾಡುತ್ತಿರುವ ಗುಮಾನಿ ವ್ಯಕ್ತವಾಗಿದೆ.