ಜಿಲ್ಲೆ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದ BMRCL; ಇನ್ಮುಂದೆ ಈ ಮಾರ್ಗದಲ್ಲಿ ದೊರೆಯಲಿದೆ ಹೆಚ್ಚುವರಿ ರೈಲು ಸೌಲಭ್ಯ

ಬೆಂಗಳೂರು: ಬೆಂಗಳೂರಿನ ಜೀವನಾಡಿ ಎಂದೇ ಕರೆಯಲ್ಪಡುವ ನಮ್ಮ ಮೆಟ್ರೋಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಇದರ ಬೆನ್ನಲ್ಲೇ ಪ್ರಯಾಣಿಕರಿಗೆ BMRCL ಶುಭ ಸುದ್ದಿ ಒಂದನ್ನು ನೀಡಿದೆ. ನೇರಳೆ ಮಾರ್ಗದ ರೈಲುಗಳ ಸಂಚಾರ ಸಮಯವನ್ನು ಬದಲಾವಣೆ ಮಾಡಲಾಗಿದ್ದು, ಮೆಜಸ್ಟಿಕ್​ನಿಂದ ಹೆಚ್ಚುವರಿ ರೈಲುಗಳ ಸೇವೆ ನೀಡುವುದಾಗಿ ತಿಳಿಸಿದೆ.

ಜುಲೈ 06ರಂದು ಹೊಸ ವೇಳಾಪಟ್ಟಿ ಜಾರಿಗೆ ಬರಲಿದ್ದು, ಹತ್ತು ರೈಲುಗಳು ಪಟ್ಟಂದೂರು ಅಗ್ರಹಾರದವರೆಗೆ (ಐಟಿಪಿಎಲ್), ನಾಲ್ಕು ರೈಲು ವೈಟ್‌ಫೀಲ್ಡ್ ಮತ್ತು ಒಂದು ರೈಲು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸಲಿವೆ. ಈ ಸಂಬಂಧ BMRCL ಪ್ರಕಟಣೆಯನ್ನು ಹೊರಡಿಸಿದ್ದು, ಸಂಪೂರ್ಣ ಮಾಹಿತಿ ನೀಡಿದೆ.

ಪ್ರಕಟಣೆಯಲ್ಲಿ ಏನಿದೆ?

ಬಿ.ಎಂ.ಆರ್.ಸಿ.ಎಲ್ ಪ್ರಯಾಣಿಕರ ಉತ್ತಮ ಪ್ರತಿಕ್ರಿಯೆ ಹಾಗೂ ನಿರಂತರ ಪ್ರೋತ್ಸಾಹಕ್ಕಾಗಿ ಧನ್ಯವಾದಗಳನ್ನು ಕೋರುತ್ತದೆ, ದಿನಾಂಕ 06.07.2024 ರಿಂದ ಜಾರಿಗೆ ಬರುವಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು ನಾಡಪ್ರಭು ಕೆಂಪೇಗೌಡ ನಿಲ್ದಾಣ - ಮೆಜೆಸ್ಟಿಕ್‌ನಿಂದ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲಾಗುತ್ತಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ ಪ್ರಸ್ತುತ 9 ರೈಲುಗಳ ಬದಲಾಗಿ ಹೆಚ್ಚುವರಿಯಾಗಿ 15 ರೈಲುಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲಾಗುವುದು. ಈ ಹದಿನೈದು ರೈಲುಗಳಲ್ಲಿ ಹತ್ತು ರೈಲುಗಳು ಪಟ್ಟಂದೂರು ಅಗ್ರಹಾರದ (ಐಟಿಪಿಎಲ್) ವರೆಗೆ, ನಾಲ್ಕು ರೈಲು ವೈಟ್‌ಫೀಲ್ಡ್ ಮತ್ತು ಒಂದು ರೈಲು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸುತ್ತವೆ.

ಇದನ್ನೂ ಓದಿ: ವಿಜಯೋತ್ಸವದ ವೇಳೆ ಆಟಗಾರರನ್ನು ನೋಡಲು ಮರವೇರಿದ ಅಭಿಮಾನಿ; ವಿರಾಟ್​ ಕೊಹ್ಲಿ ರಿಯಾಕ್ಷನ್​ ವೈರಲ್​

ಅದರಂತೆ, ಬೆಳಗಿನ ಸಮಯದಲ್ಲಿ ರೈಲುಗಳು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ 8.48, 8.58, 9.08, 9.18, 9.29, 9.39, 9.50, 10.00, 10.11, 10.21, 10.39, 10.50, 11.00, 11.22 ಪೂರ್ವಕ್ಕೆ ಹೊರಡುತ್ತವೆ. ಇದಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಲ್ಲಿ 3.3 ನಿಮಿಷಗಳ ಆವರ್ತನದಲ್ಲಿ ಬೆಳಿಗ್ಗೆ 10.25 ಗಂಟೆಯವರೆಗೆ ನಿಯಮಿತವಾಗಿ ಹಾದುಹೋಗುವ ರೈಲುಗಳು ಸಹ ಲಭ್ಯವಿರುತ್ತವೆ.
ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ಪ್ರಸ್ತುತ ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ, 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ಐಟಿಪಿಎಲ್)/ ವೈಟ್‌ ಫೀಲ್ಡ್ ವರೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ ಆವರ್ತನದಲ್ಲಿ ಲಭ್ಯವಿರುತ್ತದೆ.

ಪ್ರಯಾಣಿಕರ ಅನುಕೂಲಕ್ಕಾಗಿ 5 ನಿಮಿಷಗಳ ಆವರ್ತನದಲ್ಲಿ ಬೈಯಪ್ಪನಹಳ್ಳಿಯಿಂದ ಸಂಜೆ 4:40 ರ ಬದಲಿಗೆ 4:20 ಕ್ಕೆ ಮೈಸೂರು ರಸ್ತೆ, ನಿಲ್ದಾಣದ ಕಡೆಗೆ ಪ್ರಾರಂಭವಾಗಲಿದೆ. ಹಸಿರು ಮಾರ್ಗದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾರ್ವಜನಿಕರು ತಮ್ಮ ಅನುಕೂಲಕರ ಪ್ರಯಾಣಕ್ಕಾಗಿ ಮೇಲಿನ ಬದಲಾವಣೆಯನ್ನು ಗಮನಿಸಿ ಪ್ರಯಾಣಿಸಲು ಕೋರಿರುವುದಾಗಿ BMRCL ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.