ನನ್ನಲ್ಲಿ ವಿಶ್ವಾಸವಿರಲಿಲ್ಲ ಆದರೂ...; ಪ್ರಧಾನಿ ಮೋದಿಯೊಂದಿಗೆ ವಿಶ್ವಕಪ್​ ಪ್ರಯಾಣ ಮೆಲುಕು ಹಾಕಿದ ಕೊಹ್ಲಿ

Virat Kohli
Published on

ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದ್ದು, ಪ್ರಶಸ್ತಿ ಗೆದ್ದ ಐದು ದಿನಗಳ ಬಳಿಕ ವಿಶ್ವ ವಿಜೇತರು ತಾಯ್ನಾಡಿಗೆ ಮರಳಿದ್ದಾರೆ. ಬಾರ್ಬಡೋಸ್​ನಿಂದ ಮರಳಿದ ಬಳಿಕ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಆಟಗಾರರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹಲವು ವಿಚಾರಗಳ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದು, ವಿರಾಟ್​ ಕೊಹ್ಲಿ ಆಡಿರುವ ಮಾತುಗಳು ವೈರಲ್​ ಆಗುತ್ತಿವೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ಆರೆಂಜ್​ ಕ್ಯಾಪನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದ ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್​ನಲ್ಲೂ ಟಾಪ್​ ರನ್​ ಸ್ಕೋರರ್​ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿರಾಟ್​ ನಿರೀಕ್ಷೆಯನ್ನು ಹುಸಿ ಮಾಡಿದ್ದರು ಮತ್ತು ಕೆಲವೇ ಕೆಲವು ಪಂದ್ಯಗಳಲ್ಲಿ ರನ್​ ಗಳಿಸಿದ್ದರು. ಕಳಪೆ ಫಾರ್ಮ್​ ಹೊರತಾಗಿಯೂ ವಿರಾಟ್​ ಅವರ ಮೇಲೆ ನಾಯಕ ರೋಹಿತ್​ ಶರ್ಮಾ ಇಟ್ಟ ನಂಬಿಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಕ್ರೀಡಾ ವಲಯದಲ್ಲಿ ಈ ವಿಚಾರ ಸಖತ್​ ಸೌಂಡ್​ ಮಾಡುತ್ತಿದೆ.

ಈ ಕುರಿತು ಮಾತನಾಡಿರುವ ವಿರಾಟ್​, ಮೊದಲನೆಯದಾಗಿ ನಮ್ಮನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ನಾನು ಹೆಚ್ಚು ರನ್​ ಗಳಿಸಲು ಸಾಧ್ಯವಾಗಲಿಲ್ಲ. ನಾನು ಕೋಚ್ ಅವರ ಬಳಿ ಮಾತನಾಡುವಾಗಲೂ ನಾನು ಈ ಬಾರಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿಲ್ಲ. ನ್ಯಾಯ ಒದಗಿಸಿಲ್ಲ ಎಂದು ಹೇಳುತ್ತಿದ್ದೆ. ಅವರ ಸಮಯ ಬಂದಾಗ ನೀನು ಏನು ಎಂಬುದು ನಿರೂಪಿಸುತ್ತೀಯ ಎಂದು ವಿಶ್ವಾಸ ತುಂಬಿದ್ದರು.

ರೋಹಿತ್​ನೊಂದಿಗೆ ಬ್ಯಾಟಿಂಗ್​ ಮಾಡಲು ತೆರಳುವಾಗ ನನ್ನಲ್ಲಿ ಆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದೆ. ಆದರೆ, ಮೊದಲ ಓವರ್​ನಲ್ಲೇ ಮೂರು ಬೌಂಡರಿ ಗಳಿಸಿದಾಗ ನನ್ನಿಂದ ನಂಬಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ನಾವು ಮೂರು ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡೆವು. ಬಳಿಕ ತಂಡದ ಪರ ಉತ್ತಮ ಪ್ರದರ್ಶನ ನೀಡುವುದು ನನ್ನ ಏಕೈಕ ಗುರಿಯಾಗಿತ್ತು. ನಾನು ಪರಿಸ್ಥಿತಿಗೆ ತಕ್ಕಂತೆ ಆಡಿದೆ ಎಂದು ಭಾವಿಸುತ್ತೇನೆ. ಕೆಲವು ಘಟನೆಗಳು ಸಂಭವಿಸಿದಾಗ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟವಾಗುತ್ತದೆ ಎಂದು ವಿರಾಟ್​ ಕೊಹ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net