ವಿಜಯೋತ್ಸವದ ವೇಳೆ ಆಟಗಾರರನ್ನು ನೋಡಲು ಮರವೇರಿದ ಅಭಿಮಾನಿ; ವಿರಾಟ್​ ಕೊಹ್ಲಿ ರಿಯಾಕ್ಷನ್​ ವೈರಲ್​

India Celebration
Published on

ಮುಂಬೈ: ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ ಟೀಮ್​ ಇಂಡಿಯಾ ಬಾರ್ಬಡೋಸ್​ನಿಂದ ಐದು ದಿನಗಳ ಬಳಿಕ ತಾಯ್ನಾಡಿಗೆ ಮರಳಿದ್ದು, ನಿನ್ನೆ (ಜುಲೈ 04) ಬೆಳಗ್ಗೆ ಭಾರತಕ್ಕೆ ಬಂದಿಳಿದ ಬಳಿಕ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮುಂಬೈನಲ್ಲಿ ವಿಜಯೋತ್ಸವ ಯಾತ್ರೆಯನ್ನು ಹಮ್ಮಿಕೊಂಡಿತ್ತು. ವಿಶ್ವಕಪ್​ ವಿಜೇತರಿಗೆ ಭರ್ಜರಿ ಸ್ವಾಗತ ನೀಡಿದ ಅಭಿಮಾನಿಗಳು ನೆಚ್ಚಿನ ಆಟಗಾರರನ್ನು ನೋಡಲು ಮುಂಬೈನ ಏರ್​ಪೋರ್ಟ್​ನಿಂದ ವಾಂಖೆಡೆ ಸ್ಟೇಡಿಯಂವರೆಗೆ ರಸ್ತೆಯ ಎರಡೂ ಬದಿಯಲ್ಲಿ ಜಮಾಯಿಸಿದ್ದರು.

17 ವರ್ಷಗಳ ಬಳಿಕ ಟಿ20 ವಿಶ್ವಕಪ್​​ಅನ್ನು ಮುಡಿಗೇರಿಸಿಕೊಂಡ ರೋಹಿತ್​ ಪಡೆಯು ಇಂದು ಬೆಳಗ್ಗೆ ದೆಹಲಿಯಲ್ಲಿ ಬಂದಿಳಿದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಲ್ಲಿದ ಹೊರಟು ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈಗೆ ಅಗಮಿಸಿತ್ತು. ವಿಮಾನ ನಿಲ್ದಾಣದಿಂದ ಓಪನ್​ ಬಸ್​ನಲ್ಲಿ ವಿಜಯೋತ್ಸವ ಯಾತ್ರೆ ಆರಂಭಿಸಿದ ಆಟಗಾರರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟರು. ಈ ವೇಳೆ ಅಭಿಮಾನಿಯೊರ್ವ ಆಟಗಾರರನ್ನು ನೋಡಲು ಮರವೇರಿದ್ದು, ಆತನನನ್ನು ನೋಡಿ ವಿರಾಟ್​ ಕೊಹ್ಲಿ ನೀಡಿದ ರಿಯಾಕ್ಷನ್​ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ನ್ಯಾಶನಲ್ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನಿಂದ ವಾಂಖೆಡೆ ಸ್ಟೇಡಿಯಂಗೆ ಓಪನ್ ಬಸ್​ನಲ್ಲಿ ವಿಜಯೋತ್ಸವದ ಮೆರವಣಿಗೆಯನ್ನು ಬಿಸಿಸಿಐ ಹಮ್ಮಿಕೊಂಡಿತ್ತು. ಈ ವೇಳೆ ಲಕ್ಷಾಂತರ ಮಂದಿ ವಿಶ್ವಕಪ್​ ವಿಜೇತರನ್ನು ನೋಡಲು ಜಮಾಯಿಸಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ ಆಟಗಾರರಿದ್ದ ಬಸ್​ ಮುಂದಕ್ಕೆ ಹೋಗಲು ಸಾಧ್ಯವಾಗದಷ್ಟು ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡುವ ಆಸೆಯೊಂದಿಗೆ ಅಭಿಮಾನಿಯೋರ್ವ ಮರವೇರಿದ್ದು, ಇದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಆಟಗಾರರಿದ್ದ ಬಸ್​ನಿಂದ ಕೂಗಳತೆ ದೂರದಲ್ಲಿದ್ದ ಆತನನ್ನು ನೋಡಿ ವಿರಾಟ್​ ಕೊಹ್ಲಿ ಒಂದು ಕ್ಷಣ ಬೆರಗಾಗಿದ್ದು, ಕೆಳಗೆ ಇಳಿಯುವಂತೆ ಸೂಚಿಸಿದ್ದಾರೆ.

ಬಳಿಕ ಮರವೇರಿದ್ದ ವ್ಯಕ್ತಿಯನ್ನು ಗಮನಿಸಿದ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇದಲ್ಲದೆ ವಿಜಯೋತ್ಸವದ ವೇಳೆ ಭದ್ರತಾ ಲೋಪಗಳಾಗಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net