ಬೆಂಗಳೂರು: 'ಪ್ರಜ್ವಲ್ ಎಲ್ಲಿದ್ದಿಯಪ್ಪಾ' ಎಂಬ ಕೂಗುಗಳು ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿಬಂದಿತ್ತು. ಇನ್ನು ಪ್ರಜ್ವಲ್ ರೇವಣ್ಣ ಯಾವಾಗ ತಮ್ಮ ಮೇಲಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾರೆ? ವಿದೇಶಕ್ಕೆ ಹೋದವರು, ಇಂದಿಗೂ ಪತ್ತೆಯಾಗಿಲ್ಲ ಏನು ಕತೆ? ಎಂಬ ಹೇಳಿಕೆಗಳ ಬೆನ್ನಲ್ಲೇ ನಿನ್ನೆ(ಮೇ.27) ಕಡೆಗೂ ವಿಡಿಯೋ ಸಂದೇಶದ ಮೂಲಕ ಪ್ರತ್ಯಕ್ಷವಾದ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಇದೇ ಮೇ.31ಕ್ಕೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದೇನೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ವಿದೇಶದಲ್ಲಿಯೇ ಕುಳಿತು ವಿಡಿಯೋ ಮಾಡಿರುವ ಹಾಲಿ ಸಂಸದ, ನನ್ನ ತಾಯಿ, ಜನರು ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ. ಮೇ. 31ರಂದು ಭಾರತಕ್ಕೆ ಬರುತ್ತೇನೆ, ಎಸ್ಐಟಿ ಮುಂದೆ ಹಾಜರಾಗಿ, ತನಿಖೆಯನ್ನು ಎದುರಿಸುತ್ತೇನೆ ಎಂದಿದ್ದಾರೆ. ಇನ್ನು ಪುತ್ರ ಪ್ರಜ್ವಲ್ ರೇವಣ್ಣ ದಿಢೀರ್ ಪ್ರತ್ಯಕ್ಷವಾದ ಬೆನ್ನಲ್ಲೇ ಇದೀಗ ಭವಾನಿ ರೇವಣ್ಣ ಮಧ್ಯಂತರ ಜಾಮೀನು ಕೋರಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನು ಈ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವುದು ತಮ್ಮ ಪುತ್ರ ಪ್ರಜ್ವಲ್ ಪರವಲ್ಲ ಎಂಬುದು ಇಲ್ಲಿ ಗಮನಾರ್ಹ. ತಮ್ಮ ಪರವೇ ಬ್ಯಾಟ್ ಬೀಸಿಕೊಂಡಿರುವ ಭವಾನಿ ರೇವಣ್ಣಗೆ, ಕೆ.ಆರ್. ಪೇಟೆ ಮಹಿಳೆಯೊಬ್ಬರ ಅಪಹರಣ ಪ್ರಕರಣವನ್ನೂ ತನಿಖೆ ಮಾಡಿದ ಎಸ್ ಐಟಿಯು ಜಾರಿಗೊಳಿಸಿದ ನೋಟಿಸ್ ಹಿನ್ನಲೆ ಬಂಧನದ ಭೀತಿ ಎದುರಾಗಿದೆ. ಈ ಕುರಿತಂತೆ ಭವಾನಿ ರೇವಣ್ಣ ಹೈಕೋರ್ಟ್ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅರ್ಜೆಂಟೀನಾ ಸ್ಟೈಲ್ನಲ್ಲಿ ಕೆಕೆಆರ್ ಪ್ರಶಸ್ತಿ ಸಂಭ್ರಮ; ಲಿಯೋನೆಲ್ ಮೆಸ್ಸಿಯನ್ನು ಅನುಕರಿಸಿದ ಶ್ರೇಯಸ್ ಅಯ್ಯರ್!
ಹಾಸನ ಪೆನ್ಡ್ರೈವ್ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಎಸ್ಐಟಿ ತಂಡ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮತ್ತೊಂದು ಪ್ರಕರಣವಾದ ಕೆ.ಆರ್. ಪೇಟೆ ಮಹಿಳೆಯೊಬ್ಬರ ಅಪಹರಣ ಕೇಸ್ನ ತನಿಖೆ ಕೂಡ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೆ ಎಸ್ಐಟಿಯು ನೋಟಿಸ್ ಜಾರಿಗೊಳಿಸಿತ್ತು. ಬಂಧನದ ಭೀತಿ ಎದುರಾಗುತ್ತಿದ್ದಂತೆ ಇದೀಗ ಭವಾನಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ,(ಏಜೆನ್ಸೀಸ್).