ಬೆಂಗಳೂರು: ಕೆಂಗೇರಿ ಬಳಿಯಿರುವ ಬಂಡೆ ಮಠ ಲೇಔಟ್‌ನಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಬಿಬಿಎಂಪಿ ನಡೆಯಿಂದಾಗಿ ಅಲ್ಲಿನ ನಾಗರಿಕರು ಪರದಾಡುವಂತಾಗಿದೆ.
ವಿಧಾನಸಭೆ ಚುನಾವಣೆಗೆ ಮುನ್ನ ಬಿಬಿಎಂಪಿ 10 ಕೋಟಿ ರೂ. ವೆಚ್ಚದ ಟೆಂಡರ್ ಆಹ್ವಾನಿಸಿ ಬಂಡೆ ಮಠ ಲೇಔಟ್‌ಗೆ ಹೊಸ ರೂಪು ನೀಡುವುದಾಗಿ ಹೇಳಿತ್ತು. ಟೆಂಡರ್ ಅಂತಿಮಗೊಂಡ ಬೆನ್ನಲ್ಲೇ ಕಾಮಗಾರಿ ಆರಂಭಿಸಿದರೂ ಕೆಲವೇ ದಿನಗಳಲ್ಲೇ ಸ್ಥಗಿತಗೊಳಿಸಲಾಗಿದೆ. ಗುತ್ತಿಗೆ ಪಡೆದಿದ್ದ ವ್ಯಕ್ತಿ ಕೂಡ ನಾಪತ್ತೆಯಾಗಿದ್ದು, ಪಾಲಿಕೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆಕ್ಷೇಪ ಇಲ್ಲಿನ ನಿವಾಸಿಗಳಿಂದ ವ್ಯಕ್ತವಾಗಿದೆ.
ಟೆಂಡರ್ ಮೊತ್ತದಲ್ಲಿ ಚರಂಡಿಗಳ ಪುನರ್ ನಿರ್ಮಾಣ, ರಸ್ತೆಗಳ ಸುಧಾರಣೆ, ಉದ್ಯಾನವನಗಳ ಮೇಲ್ದರ್ಜೆ ಕೆಲಸ ಸೇರಿತ್ತು. ಕೆಲ ರಸ್ತೆಗಳಲ್ಲಿ ಹಳೆಯ ಚರಂಡಿಗೆ ಬಳಸಿದ್ದ ಕಲ್ಲುಗಳನ್ನು ಕಿತ್ತು ಹೊಸದಾಗಿ ಬಾಕ್ಸ್ ಮಾದರಿಯ ಕಾಂಕ್ರಿಟ್ ಡ್ರೈನೇಜ್ ನಿರ್ಮಿಸಬೇಕಿತ್ತು. ಆದರೆ ಕೆಲ ರಸ್ತೆಗಳಲ್ಲಿದ್ದ ಚರಂಡಿಯ ಹೂಳು, ಗಿಡ-ಗಂಟಿಗಳನ್ನು ತೆಗೆದು ಡ್ರೈನೇಜ್‌ಗಾಗಿ ನೆಲಪದರವಾಗಿ ಕಾಂಕ್ರೀಟ್ ಮಾತ್ರ ಹಾಕಲಾಗಿದೆ. ಉಳಿದ ಕಾಮಗಾರಿಯನ್ನು ಕೈಗೊಳ್ಳದೆ ಹಾಗೆಯೇ ಬಿಡಲಾಗಿದೆ. ತಿಂಗಳು ಕಳೆದರೂ ಗುತ್ತಿಗೆದಾರ ಇತ್ತ ತಲೆಹಾಕಿಲ್ಲ. ಬಿಬಿಎಂಪಿ ಅಧಿಕಾರಿಗಳು ಕೂಡ ಸ್ಥಳಪರಿಶೀಲನೆ ನಡೆಸದೆ ಮೌನಕ್ಕೆ ಶರಣರಾಗಿದ್ದಾರೆ ಎಂದು ಅಲ್ಲಿನ ನಿವಾಸಿ ಟಿ.ಎಂ.ಸತೀಶ್ ದೂರಿದ್ದಾರೆ.
ದಶಕದಿಂದ ಬಂಡೆ ಮಠ ಬಡಾವಣೆ ಸೌಲಭ್ಯಗಳಿಲ್ಲದೆ ಬಡವಾಗಿತ್ತು. ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ನಿರ್ಮಿಸಿರುವ ಈ ಲೇಔಟ್‌ಗೆ ಸಕಲ ಸೌಕರ್ಯ ಕಲ್ಪಿಸುವುದಾಗಿ ಮಂಡಳಿಯು ಭರವಸೆ ನಿಡುವುದರಲ್ಲಿಯೇ ಕಾಲಕಳೆದಿತ್ತು. ಸೌಲಭ್ಯ ಒದಗಿಸದ ಕಾರಣ ಇಲ್ಲಿನ ನಾಗರಿಕ ಸಂಘಟನೆಯು ಲೋಕಾಯುಕ್ತ ಹಾಗೂ ವಿಧಾನಸಭೆಯ ಅರ್ಜಿ ಸಮಿತಿಗೆ ದೂರು ನೀಡಿತ್ತು. ಆ ಬಳಿಕ ನಡೆದ ಹತ್ತಾರು ಸಭೆ, ಚರ್ಚೆಯ ಲವಾಗಿ ಕೆಎಚ್‌ಬಿ ನಿರ್ಮಿಸಿರುವ ಬಡಾವಣೆಯನ್ನು ತನಗೆ ಹಸ್ತಾಂತರಿಸಿದರೆ ಸೌಲಭ್ಯ ಕಲ್ಪಿಸುವುದಾಗಿ ಬಿಬಿಎಂಪಿ ಒಪ್ಪಿಗೆ ನೀಡಿತ್ತು. ಇದಕ್ಕೆ ಅರ್ಜಿ ಸಮಿತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಮುಖ್ಯಸ್ಥರು ಅನುಮೋದನೆ ನೀಡಿದ್ದರು. ಲೇಔಟ್ ಹಸ್ತಾಂತರ ಬೆನ್ನಲ್ಲೇ ಕೆಎಚ್‌ಬಿ ಮೂಲಸೌಕರ್ಯ ಕೆಲಸಗಳಿಗೆ 5 ಕೋಟಿ ರೂ. ಮೊತ್ತವನ್ನು ಬಿಬಿಎಂಪಿಗೆ ಜಮೆ ಮಾಡಿತ್ತು. ಈ ಹಣಕ್ಕೆ ಇಷ್ಟೇ ಮೊತ್ತದ ಅನುದಾನ ಬಳಸಿ ವಿವಿಧ ಕಾಮಗಾರಿಗೆ ಪಾಲಿಕೆ ಟೆಂಡರ್ ಆಹ್ವಾನಿಸಿ ಕೆಲಸ ಆರಂಭಿಸಿತ್ತು. ಈಗ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.
ಕೆಎಚ್‌ಬಿ ಬಡಾವಣೆಯಲ್ಲಿ ಸಮರ್ಪಕವಾದ ಮೂಲಸೌಲಭ್ಯಗಳಿಲ್ಲದೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಬೀದಿದೀಪಗಳಿಲ್ಲದೆ ರಾತ್ರಿ ವೇಳೆ ಕತ್ತಲು ಆವರಿಸಿ ಜನರು ಓಡಾಟವನ್ನೇ ನಿಲ್ಲಿಸಿದ್ದಾರೆ. ಅಪೂರ್ಣ ಕಾಮಗಾರಿಯಿಂದ ವಾಹನದಲ್ಲಿ ತೆರಳಲು ಕಷ್ಟವಾಗಿದೆ. ಅರ್ಧಕ್ಕೆ ನಿಲ್ಲಿಸಿರುವ ಕೆಲಸವನ್ನು ಬಿಬಿಎಂಪಿ ಬೇಗ ಪುನಾರಂಭಿಸಲಿ. ರಾಮಕೃಷ್ಣೇಗೌಡ, ಬಂಡೆಮಠ ಕೆಎಚ್‌ಬಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ