ಬೆಳಗಾವಿ: ಕಳೆದ ವರ್ಷ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಡೆದಿದ್ದ ವಂಟಮೂರಿ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯ ಕಾಗವಾಡದ ಐನಾಪುರ ಗ್ರಾಮದಲ್ಲಿ ಭೂ ಒತ್ತುವರಿ ಪ್ರಶ್ನಿಸಿದ್ದಕ್ಕೆ ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂತ್ರಸ್ತೆಯ ಪುತ್ರಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಘಟನೆ ನಡೆದು ಏಳು ತಿಂಗಳಾದ ಬಳಿಕ ಬೆಳಕಿಗೆ ಬಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೂವರು ಆರೋಪಿಗಳು 2023ರ ಜುಲೈ 31ರಂದು ನಮ್ಮ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. 2023ರ ಆಗಸ್ಟ್ 1ರಂದು ತಮ್ಮನ ಮೇಲೂ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತೆಯ ಪುತ್ರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆ ಕುಟಂಬಕ್ಕೆ 1993ರಲ್ಲಿ ಸರ್ಕಾರ 3 ಎಕರೆ ಕೃಷಿ ಜಮೀನು ಮಂಜೂರು ಮಾಡಿದೆ. ಇದರಲ್ಲಿ 20 ಗುಂಟೆ ಜಮೀನು ಹಾಗೂ ಪಕ್ಕದ ಸರ್ಕಾರಿ ರಸ್ತೆಯನ್ನೂ ಆರೋಪಿಗಳಾದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಲು ಹೋದಾಗ ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಇದಲ್ಲದೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ.
ವಿಚಾರ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ಧಾವಿಸಿದ ಬೆಳಗಾವಿ ಹೆಚ್ಚುವರಿ ಎಸ್ಪಿ ಶ್ರುತಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಕಾಗವಾಡ ತಹಶೀಲ್ದಾರ್ ಸಂಜಯ ಇಂಗಳೆ ಅವರ ತಂಡ ಸಂತ್ರಸ್ತೆ ಹಾಗೂ ಕುಟುಂಬದವರಿಂದ ಮಾಹಿತಿ ಕಲೆ ಹಾಕಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ.