

ಹೈದರಾಬಾದ್: ಪರೀಕ್ಷೆ ಕೇಂದ್ರಕ್ಕೆ ಒಂದು ನಿಮಿಷ ತಡವಾಗಿ ಆಗಮಿಸಿದ ಎಂಬ ಕಾರಣಕ್ಕೆ ವಿದ್ಯಾರ್ಥಿಯನ್ನು ಒಳಬಿಡದೆ ಸತಾಯಿಸಿದ ಕಾರಣ ಆತ ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಟೇಕುಂ ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಇವರು 11ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಆದಿಲಾಬಾದ್ ಜಿಲ್ಲೆಯ ಸತ್ನಾಲಾ ಅಣೆಕಟ್ಟಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆದಿಲಾಬಾದ್ ಜಿಲ್ಲಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು, ನನ್ನನ್ನು ಕ್ಷಮಿಸಿ ಅಪ್ಪಾ, ಈ ಆಘಾತವನ್ನು ನಿಭಾಯಿಸಲು ನನಗೆ ಸಾಧ್ಯವಾಗುತ್ತಿಲ್ಲ, ನೀವು ನನಗಾಗಿ ಬಹಳಷ್ಟು ಮಾಡಿದ್ದೀರಿ, ಆದರೆ ನಾನು ನಿಮಗಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ನಿಮಿಷ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದಿದ್ದಕ್ಕೆ ನನ್ನನ್ನು ಒಳಬಿಡಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ತೆಯಾಗಿರುವ ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ವಿದ್ಯಾರ್ಥಿಯ ಸಾವು ರಾಜ್ಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು ಹಲವರು ತೆಲಂಗಾಣ ರಾಜ್ಯ ಶಿಕ್ಷಣ ಮಂಡಳಿಯ ನಿಯಮಗಳಿಗೆ ಕಿಡಿಕಾರಿದ್ದಾರೆ. ಒಂದು ನಿಮಿಷ ತಡವಾದರು ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯಲು ಬಿಡದಿರುವುದು ಯಾವ ರೀತಿಯ ನ್ಯಾಯ. ಕೂಡಲೇ ಈ ರೀತಿಯ ನಿಯಮಗಳನ್ನು ಹಿಂಪಡೆಯಬೇಕು ಎಂದು ಹಲವರು ಆಗ್ರಹಿಸಿದ್ದಾರೆ.